ಬೆಳ್ತಂಗಡಿಯಲ್ಲಿ ಬಿರುಸಿನ ಮತದಾನ: 12 ಗಂಟೆ ವೇಳೆ 35 ಶೇ. ಹಕ್ಕು ಚಲಾವಣೆ
ಡಾ.ಹೆಗ್ಗಡೆ, ಬೆಳ್ತಂಗಡಿ ಬಿಷಪ್, ಹರೀಶ್ ಪೂಂಜಾ, ರಕ್ಷಿತ್ ಶಿವರಾಂ ಸಹಿತ ಗಣ್ಯರಿಂದ ಮತದಾನ

ಬೆಳ್ತಂಗಡಿ, ಮೇ 10: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಮದ್ಯಾಹ್ನ 12 ಗಂಟೆಯ ವೇಳೆ ಶೇ.35ರಷ್ಟು ಮತ ಚಲಾವಣೆಯಾಗಿದೆ. ಕ್ಷೇತ್ರದಲ್ಲಿ 241 ಮತಗಟ್ಟೆಗಳಿದ್ದು, 2,28,871ಮಂದಿ ಮತದಾರರಿದ್ದಾರೆ.
ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ಜನರು ಸರತಿಯ ಸಾಲಿನಲ್ಲಿ ನಿಂತು ತಮ್ಮ ಮತದಾನ ಮಾಡುತ್ತಿದ್ದಾರೆ.
ಬೆಳಗ್ಗಿನಿಂದಲೇ ಮತದಾರರು ಸಾಲಿನಲ್ಲಿ ನಿಂತಿದ್ದು, ಮತದಾನ ಪ್ರಕ್ರಿಯೆ ನಿಧಾನ ಗತಿಯಲ್ಲಿ ನಡೆಯುತ್ತಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಶಾಲೆಯ ಮತಗಟ್ಟೆಗೆ ತನ್ನ ಪತ್ನಿ ಹೇಮಾವತಿ ಹೆಗ್ಗಡೆಯವರೊಂದಿಗೆ ತೆರಳಿ ಮತ ಚಲಾಯಿಸಿದರು.
ಬೆಳ್ತಂಗಡಿ ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಲಾರೆನ್ಸ್ ಮುಕ್ಕುಯಿ ಅವರು ಬೆಳ್ತಂಗಡಿ ಮಾದರಿ ಶಾಲೆಯಲ್ಲಿ ಮತ ಚಲಾಯಿಸಿದರು.
ಶಾಸಕ ಹರೀಶ್ ಪೂಂಜಾ ಗರ್ಡಾಡಿಯ ಶಾಲೆಯಲ್ಲಿ ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಬೆಳ್ತಂಗಡಿ ಮಾದರಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಉಜಿರೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಿದರು. ಎಸ್.ಡಿಪಿಐ ಅಭ್ಯರ್ಥಿ ಅಕ್ಬರ್ ನಗರದ ಮಾದರಿ ಶಾಲೆಯಲ್ಲಿ ಮತ ಚಲಾಯಿಸಿದರೆ, ಜೆಡಿಎಸ್ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಅವರು ಮುಂಡಾಜೆಯಲ್ಲಿ ತನ್ನ ಮತದಾನದ ಹಕ್ಕನ್ನು ಚಲಾಯಿಸಿದರು.
ತಾಲೂಕಿನ ಸೂಕ್ಷ್ಮ ಮತಗಟ್ಟೆಗಳಲ್ಲಿ ಅರೆಸೇನಾ ಪಡೆ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದ್ದು ಎಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆದಿರುವುದು ವರದಿಯಾಗಿಲ್ಲ. ಚಾರ್ಮಾಡಿಯ ಒಂದು ಮತಗಟ್ಟೆಯಲ್ಲಿ ಮತ ಯಂತ್ರದ ತಕರಾರಿನಿಂದಾಗಿ ಮತದಾನ ಆರಂಭವಾಗಲು ಒಂದಿಷ್ಟು ವಿಳಂಬವಾಗಿತ್ತು.