ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ತಮಿಳುನಾಡು ಸರಕಾರದಿಂದ ಮಾನನಷ್ಟ ಮೊಕದ್ದಮೆ ದಾಖಲು

ಚೆನ್ನೈ: ‘ಡಿಎಂಕೆ ಫೈಲ್ಸ್’ ಮೂಲಕ ಭ್ರಷ್ಟಾಚಾರ ಆರೋಪ ಹೊರಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ವಿರುದ್ಧ ತಮಿಳುನಾಡು ಸರಕಾರ ಬುಧವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.
ಅಣ್ಣಾಮಲೈ ಅವರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ಗೆ ಮಾನಹಾನಿ ಮಾಡುತ್ತಿದ್ದಾರೆ ಎಂದು ಪಕ್ಷ ಆರೋಪಿಸಿದೆ.
2011ರಲ್ಲಿ ಚೆನ್ನೈ ಮೆಟ್ರೋ ಒಪ್ಪಂದಕ್ಕಾಗಿ ಎಂ.ಕೆ. ಸ್ಟಾಲಿನ್‌ಗೆ 200 ಕೋಟಿ ರೂ. ನೀಡಲಾಗಿದೆ ಎಂದು ಬಿಜೆಪಿ ನಾಯಕ ಇತ್ತೀಚೆಗೆ ಆರೋಪಿಸಿದ್ದರು. ಸ್ಟಾಲಿನ್ ಅವರ ಪಕ್ಷವಾದ ಡಿಎಂಕೆ ನಾಯಕರು 1.34 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ, ಭ್ರಷ್ಟಾಚಾರದ ಮೂಲಕ ಇದನ್ನು ಗಳಿಸಿದ್ದಾರೆ ಎಂದು ಆರೋಪಿಸಿರುವ ಅಣ್ಣಾಮಲೈ, ಮುಖ್ಯಮಂತ್ರಿ ಅವರ ಕುಟುಂಬ ಸದಸ್ಯರು ರಾಜ್ಯದಲ್ಲಿ ಹೂಡಿಕೆ ಮಾಡುತ್ತಿರುವ ದುಬೈ ಕಂಪನಿಯ ನಿರ್ದೇಶಕರು ಎಂದು ಆರೋಪಿಸಿದರು.
ಈ ಹಿಂದೆ ಡಿಎಂಕೆಯ ಲೀಗಲ್ ನೋಟಿಸ್ ನಂತರ ಕ್ಷಮೆ ಯಾಚಿಸಲು ನಿರಾಕರಿಸಿದ ಅಣ್ಣಾಮಲೈ ಅವರು ನ್ಯಾಯಾಲಯದಲ್ಲಿ ಪ್ರಕರಣವನ್ನು ಎದುರಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಈ ವರ್ಷ ಎಪ್ರಿಲ್ 14 ರಂದು 1.34 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯ ದೀರ್ಘ ಪಟ್ಟಿಯನ್ನು ಸಾರ್ವಜನಿಕಗೊಳಿಸಿದ್ದರು. ಈ ಆಸ್ತಿಪಾಸ್ತಿಗಳು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಸೇರಿದಂತೆ ಪ್ರಮುಖ ಡಿಎಂಕೆ ನಾಯಕರು ಹಾಗೂ ದುರೈ ಮುರುಗನ್ ಸೇರಿದಂತೆ ಇತರ ಮಂತ್ರಿಗಳ ಒಡೆತನದಲ್ಲಿದೆ ಎಂದು ಅವರು ಹೇಳಿದ್ದಾರೆ.
ಅಣ್ಣಾಮಲೈ ಅವರ ಆರೋಪವನ್ನು ಡಿಎಂಕೆ "ತಮಾಷೆ" ಎಂದು ಕರೆದಿತ್ತು.







