ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಗೆ ಹೆಚ್ಚು ಸ್ಥಾನ, ಅತಂತ್ರ ಫಲಿತಾಂಶ ಸಾಧ್ಯತೆ
ಕರ್ನಾಟಕ ವಿಧಾನಸಭಾ ಚುನಾವಣೆ

ಬೆಂಗಳೂರು: ಆರು ಮತಗಟ್ಟೆ ಸಮೀಕ್ಷೆಗಳ ಪೈಕಿ ಐದು ಮತಗಟ್ಟೆ ಸಮೀಕ್ಷೆಗಳು ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ಭವಿಷ್ಯ ನುಡಿದಿದ್ದು, ಈ ಪೈಕಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಹೇಳಿವೆ. ಅವುಗಳ ಪ್ರಕಾರ, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ 'ಕಿಂಗ್ ಮೇಕರ್' ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ.
224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಬಹುಮತಕ್ಕೆ 113 ಸ್ಥಾನ ಗಳಿಸಬೇಕಿದೆ. ಉಳಿದ ಸಮೀಕ್ಷಾ ಸಂಸ್ಥೆಗಳನ್ನು ಹೊರತುಪಡಿಸಿದರೆ ಝೀ ಮ್ಯಾಟ್ರಿಝ್ ಮಾತ್ರ ಬಹುಮತಕ್ಕಿಂತ ಹೆಚ್ಚಾದ 118 ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದೆ ಎಂದು ಅಂದಾಜಿಸಿದೆ. ಇನ್ನುಳಿದ ಎರಡು ಸಮೀಕ್ಷೆಗಳು ಬಿಜೆಪಿ ಕ್ರಮವಾಗಿ 114 ಹಾಗೂ 117 ಸ್ಥಾನ ಗಳಿಸಲಿದೆ ಎಂದು ಅಂದಾಜಿಸಿವೆ.
ನ್ಯೂಸ್ ನೇಷನ್-ಸಿಜಿಎಸ್ ಸಮೀಕ್ಷಾ ಸಂಸ್ಥೆಯು ಆಡಳಿತಾರೂಢ ಬಿಜೆಪಿ 114 ಸ್ಥಾನ ಗಳಿಸುವ ಮೂಲಕ ಬಹುಮತದ ಸಂಖ್ಯೆಯನ್ನು ದಾಟಲಿದ್ದು, ಕಾಂಗ್ರೆಸ್ 86 ಸ್ಥಾನಗಳು ಹಾಗೂ ಜೆಡಿಎಸ್ 21 ಸ್ಥಾನ ಗಳಿಸಲಿವೆ ಎಂದು ಅಂದಾಜಿಸಿದೆ.
ಸುವರ್ಣ ನ್ಯೂಸ್-ಜನ್ ಕಿ ಬಾತ್ ಸಮೀಕ್ಷಾ ಸಂಸ್ಥೆಯು ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, 94-117 ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ. ಕಾಂಗ್ರೆಸ್ 91-106 ಹಾಗೂ ಜೆಡಿಎಸ್ 14-24 ಸ್ಥಾನ ಗಳಿಸಲಿವೆ ಎಂದು ಹೇಳಲಾಗಿದೆ.
ಉಳಿದ ಸಮೀಕ್ಷಾ ಸಂಸ್ಥೆಗಳ ಅಂದಾಜು ಹೀಗಿದೆ:
ರಿಪಬ್ಲಿಕ್-ಮಾರ್ಕ್: ಬಿಜೆಪಿ - 85-100, ಕಾಂಗ್ರೆಸ್ - 94-108, ಜೆಡಿಎಸ್ - 24-32
ಟಿವಿ9-ಭರತ್‌ವಂಶ್-ಪೋಲ್‌ಸ್ಟ್ರ್ಯಾಟ್: ಬಿಜೆಪಿ - 88-98, ಕಾಂಗ್ರೆಸ್ - 99-109, ಜೆಡಿಎಸ್ - 21-26
ಝೀ ನ್ಯೂಸ್ ಮ್ಯಾಟ್ರಿಝ್ : ಬಿಜೆಪಿ - 79-94, ಕಾಂಗ್ರೆಸ್ - 103-118, ಜೆಡಿಎಸ್ - 25-33
ಎಬಿಪಿ ನ್ಯೂಸ್-ಸಿ ವೋಟರ್: ಬಿಜೆಪಿ - 83-95, ಕಾಂಗ್ರೆಸ್ - 100-112, ಜೆಡಿಎಸ್ - 21-29
ಟಿವಿ9- ಸಿ- ವೋಟರ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 100-112, ಬಿಜೆಪಿ 83-95 ,ಜೆಡಿಎಸ್ - 21-29, ಇತರರು - 2-6 ಸೀಟುಗಳನ್ನು ಗಳಿಸಲಿದೆ ಎಂದು ಹೇಳಿದೆ.
ಬುಧವಾರ ಸಂಜೆ 6 ಗಂಟೆಗೆ ಮತ ಚಲಾವಣೆ ಅಂತ್ಯಗೊಂಡಿದ್ದು, ಶನಿವಾರ(ಮೇ 13)ದಂದು ಮತ ಎಣಿಕೆ ಕಾರ್ಯ ನಡೆಯಲಿದೆ.







