ಚಿಕ್ಕಪೇಟೆ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಕ್ರಮ ಸಂಖ್ಯೆ ಅದಲು ಬದಲು: ಬೆಂಬಲಿಗರಿಂದ ಆಕ್ರೋಶ

ಬೆಂಗಳೂರು, ಮೇ 10: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಧಿಕಾರಿಗಳು ಮತಗಟ್ಟೆಯ ಬಳಿ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಕ್ರಮ ಸಂಖ್ಯೆಯನ್ನು ಅದಲು-ಬದಲು ಮಾಡಿದ್ದಾರೆ ಎಂದು ಕೆಜಿಎಫ್ ಬಾಬು ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿದೆ.
ಚಿಕ್ಕಪೇಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಕ್ರಮ ಸಂಖ್ಯೆ 12 ಎಂದು ಬ್ಯಾಲೆಟ್ ಪೇಪರ್‍ನಲ್ಲಿದೆ. ಆದರೆ, ಗೋಡೆಯ ಮೇಲೆ ಇರುವ ಮಾಹಿತಿ ಫಲಕದಲ್ಲಿ ಕೆಜಿಎಫ್ ಬಾಬು ಕ್ರಮ ಸಂಖ್ಯೆ 13 ಎಂದು ತಪ್ಪಾಗಿ ದಾಖಲು ಮಾಡಲಾಗಿದೆ ಎಂದು ದೂರಿದ್ದಾರೆ.
ಚುನಾವಣಾ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಕ್ರಮಸಂಖ್ಯೆ 12 ಅಡುಗೆ ಅನಿಲದ ಸಿಲಿಂಡರ್ ಗುರುತಿಗೆ ಮತಹಾಕಿ ಎಂದು ಪ್ರಚಾರ ಮಾಡಿಕೊಂಡು ಬರಲಾಗಿದೆ. ಆದರೆ, ಈಗ ಚುನಾವಣಾ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗ ಮತಗಳು ಬೇರೊಬ್ಬರಿಗೆ ಬೀಳುತ್ತಿವೆ ಎಂದು ಕೆಜಿಎಫ್ ಬಾಬು ಬೆಂಬಲಿಗರು ಚುನಾವಣಾ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ 1ಸಾವಿರ ಕೋಟಿ ರೂ.ಗಿಂತ ಅಧಿಕ ಆಸ್ತಿಯನ್ನು ಹೊಂದಿದ ಕೆಲವೇ ಚುನಾವಣಾ ಅಭ್ಯರ್ಥಿಗಳ ಪೈಕಿ ಚಿಕ್ಕಪೇಟೆ ಅಭ್ಯರ್ಥಿ ಕೆಜಿಎಫ್ ಬಾಬು ಒಬ್ಬರು. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದಾರೆ. ಕೆಜಿಎಫ್ ಬಾಬು ಕ್ರಮ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ ಚುನಾವಣಾ ಆಯೋಗವು ಸ್ಪಷ್ಟನೆ ಕೊಡಲಾಗದೇ ತಪ್ಪು ಒಪ್ಪಿಕೊಂಡಿದೆ.







