ಪಿಎಸ್ಸೈ ನೇಮಕಾತಿ ಹಗರಣ | ಅಮೃತ್ ಪೌಲ್ ನ್ಯಾಯಾಂಗ ಬಂಧನ ವಿಸ್ತರಣೆ: ಸಿಐಡಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಮೇ 10: ಪಿಎಸ್ಸೈ ನೇಮಕಾತಿ ಅಕ್ರಮದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಅವರನ್ನು ಅಕ್ರಮವಾಗಿ ವಶದಲ್ಲಿ ಇಡಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸಿಐಡಿಗೆ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ಅಮೃತ್ ಪೌಲ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ಅಲ್ಲದೆ, ಅಮೃತ್ ಪೌಲ್ ಅವರ ನ್ಯಾಯಾಂಗ ಬಂಧನದ ವಿಸ್ತರಣೆಯನ್ನು ಯಾವುದೇ ಕೋರಿಕೆ ಇಲ್ಲದೇ ವಿಚಾರಣಾಧೀನ ನ್ಯಾಯಾಲಯ ವಿಸ್ತರಣೆ ಮಾಡಿರುವುದು ಕಾನೂನುಬಾಹಿರ ಎಂದು ಆಕ್ಷೇಪಿಸಿ ನ್ಯಾಯಪೀಠವು ವಿಚಾರಣೆ ನಡೆಸಿತು. ಅಲ್ಲದೆ, ಅಪರಾಧ ತನಿಖಾ ದಳಕ್ಕೆ(ಸಿಐಡಿ) ನೋಟಿಸ್ ಜಾರಿ ಮಾಡಿದೆ.
ಚಾರ್ಜ್‍ಶೀಟ್ ಸಲ್ಲಿಸಿದ ಬಳಿಕ ಸಂಜ್ಞೇಯ ಪರಿಗಣಿಸದೇ ಪೌಲ್ ಅವರನ್ನು ಹವಾಲತ್ತಿಗೆ (ರಿಮ್ಯಾಂಡ್) ನೀಡುವ ಮೂಲಕ ಮ್ಯಾಜಿಸ್ಟ್ರೇಟ್ ಕೋರ್ಟ್ ಪ್ರಮಾದ ಎಸಗಿದೆ. ಕಳೆದ ವರ್ಷ ಪೌಲ್‍ರನ್ನು ಬಂಧನ ಮಾಡಲಾಗಿದ್ದು, ಚಾರ್ಜ್‍ಶೀಟ್ ಸಲ್ಲಿಸಿ ಹಲವು ತಿಂಗಳಾದರೂ ಅವರನ್ನು ಇನ್ನೂ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರಕಾರದಿಂದ ಪ್ರಾಸಿಕ್ಯೂಷನ್ ಮಾಡಲು ಅನುಮತಿಯನ್ನೂ ಪಡೆಯಲಾಗಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ 35ನೆ ಆರೋಪಿಯಾಗಿರುವ ಅಮೃತ್ ಪೌಲ್ ಅವರು ಸಿಆರ್‍ಪಿಸಿ ಸೆಕ್ಷನ್ 309 (2)ರ ಅಡಿ ಹವಾಲತ್ತು ರದ್ದು ಮಾಡಿ, ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಲಾಗಿತ್ತು. ಇದನ್ನು ವಿಚಾರಣಾಧೀನ ಕೋರ್ಟ್ ಮಾನ್ಯ ಮಾಡಿರಲಿಲ್ಲ.







