ವಿಧಾನಸಭಾ ಚುನಾವಣೆ: ಉತ್ಸಾಹದಿಂದ ಮತ ಚಲಾಯಿಸಿದ ಯುವ ಮತದಾರರು

ಬೆಂಗಳೂರು, ಮೇ 10: ರಾಜ್ಯಾದ್ಯಂತ ವಿಧಾನಸಭಾ ಚುನಾವಣೆಗೆ ಬಿರುಸಿನ ಮತದಾನ ನಡೆದಿದ್ದು, ಇದೇ ಮೊದಲ ಬಾರಿಗೆ ಮತದಾನ ಮಾಡುವ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ.
ಮೊದಲ ಬಾರಿಗೆ ಮತದಾನ ಮಾಡಿದ ಯುವ ಮತದಾರೆ ಅಮೂಲ್ಯ ಮಾತನಾಡಿ, ನಾನು ಉನ್ನತ ಶಿಕ್ಷಣಕ್ಕೆಂದು ವಿದೇಶಕ್ಕೆ ಹೋಗುತ್ತಿದ್ದೇನೆ. ಅದಕ್ಕಿಂತ ಮುಂಚೆ ನನ್ನ ಮೊದಲ ಹಕ್ಕನ್ನು ಚಲಾಯಿಸಿದ್ದು, ತುಂಬಾ ಹೆಮ್ಮೆ ಇದೆ ಎಂದು ತಿಳಿಸಿದರು.
ಯುವ ಮತದಾರೆ ತನೀಷಾ ಮಾತನಾಡಿ, ‘ಮೊದಲ ಬಾರಿ ಮತದಾನ ಹಾಕಿರುವುದರಿಂದ ಖುಷಿಯಾಗಿದೆ. ಎಲ್ಲ ಯುವ ಮತದಾರರು ಮತ ಚಲಾಯಿಸಲು ಮುಂದೆ ಬರಬೇಕು. ಮತದಾನ ಪ್ರತಿಯೊಬ್ಬರ ಮೂಲಭೂತ ಹಕ್ಕು. ಮೊದಲ ಬಾರಿಗೆ ಮತದಾನವಾಗಿದ್ದರಿಂದ ಮತದಾನದ ಪ್ರಕ್ರಿಯೆ ಬಗ್ಗೆ ಗೊತ್ತಿರಲಿಲ್ಲ. ಹೀಗಾಗಿ ಸ್ವಲ್ಪ ಗಲಿಬಿಲಿ ಆಗಿತ್ತು’ ಎಂದು ಹೇಳಿದರು.
ಯುವ ಮತದಾರೆ ಯಶಸ್ವಿನಿ ಮಾತನಾಡಿ, ‘ಮೊದಲ ಬಾರಿಗೆ ಮತದಾನ ಹಿನ್ನೆಲೆ ಸಂತೋಷವಾಗುತ್ತಿದೆ. ಎಲ್ಲರೂ ಮುಂದೆ ಮತದಾನ ಮಾಡಬೇಕು. ಮತದಾನದ ಮೂಲಕ ನಮ್ಮ ಧ್ವನಿ ಎತ್ತಲು ಸಾಧ್ಯವಾಗುತ್ತದೆ. ಆರ್ಥಿಕತೆ, ರಾಜಕೀಯ ಪರಿಸ್ಥಿತಿ ಬಗ್ಗೆಯೂ ಗೊತ್ತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಮತ್ತೊಬ್ಬ ಮತದಾರೆ ವೈಶಾಲಿ ಮಾತನಾಡಿ, ನಾನು ಮೊದಲ ಬಾರಿಗೆ ಮತದಾನವನ್ನು ಮಾಡಿದ್ದೇನೆ. ಯಾವುದೇ ಸರಕಾರ ಅಧಿಕಾರಕ್ಕೂ ಬಂದರೂ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದರು.
ಯುವ ಮತದಾರ ದೀಪೇಶ್ ಮಾತನಾಡಿ, ನಾವು ಇಂದು ಮತದಾನ ಮಾಡಿದರೆ, ಮುಂದೆ ಬರುವ ಪೀಳಿಗೆ ಸಹ ಮತದಾನ ಮಾಡಲು ಪ್ರೇರಣೆ ನೀಡಿದಂತೆ ಆಗುತ್ತದೆ. ಮೊದಲ ಸಲ ಮತದಾನ ಮಾಡಿದ್ದು ನನಗೆ ಖುಷಿ ಕೊಟ್ಟಿದೆ. ಮತಗಟ್ಟೆಯಲ್ಲಿ ಮತದಾನಕ್ಕೆ ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಯುವಕರು ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಹೇಳಿದರು.







