ವಾಟ್ಸ್ಆ್ಯಪ್ ಬಳಕೆದಾರರ ಮೈಕ್ರೋಫೋನ್ ಕದ್ದು ಬಳಸುತ್ತಿದೆಯೆಂಬ ಆರೋಪ ಕುರಿತು ಪರಿಶೀಲನೆ: ಕೇಂದ್ರ
ಹೊಸದಿಲ್ಲಿ, ಮೇ 10: ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಗೊತ್ತಾಗದಂತೆ ಅವರ ಸಾಧನಗಳ ಮೈಕ್ರೋಫೋನ್ ಅನ್ನು ಬಳಸುತ್ತಿದೆ ಎಂಬ ಆರೋಪಗಳ ಕುರಿತು ಪರಿಶೀಲನೆ ನಡೆಸುವುದಾಗಿ ಕೇಂದ್ರವು ಬುಧವಾರ ತಿಳಿಸಿದೆ.
ಟ್ವಿಟರ್ನಲ್ಲಿ ಇಂಜಿನಿಯರಿಂಗ್ ನಿರ್ದೇಶಕರಾಗಿರುವ ಫೋಡ್ ಡಬಿರಿ ವಾಟ್ಸ್ಆ್ಯಪ್ ತಾನು ನಿದ್ರಿಸುತ್ತಿದ್ದಾಗ ತನಗೆ ಗೊತ್ತಿಲ್ಲದೆ ತನ್ನ ಸ್ಮಾರ್ಟ್ ಫೋನ್ ನ ಮೈಕ್ರೋಫೋನ್ ನ್ನು ಬಳಸಿತ್ತು ಎಂದು ಮೇ 6ರಂದು ಟ್ವೀಟ್ ನಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರದ ಭರವಸೆ ಹೊರಬಿದ್ದಿದೆ. ತನ್ನ ಆರೋಪಕ್ಕೆ ಸಮರ್ಥನೆಯಾಗಿ ಡಬಿರಿ ವಾಟ್ಸ್ಆ್ಯಪ್ನಿಂದ ಮೈಕ್ರೋಫೋನ್ನ ಬಳಕೆಯನ್ನು ತೋರಿಸುವ ತನ್ನ ಸ್ಮಾರ್ಟ್ ಫೋನ್ ನಿಂದ ತೆಗೆದ ಸ್ಕ್ರೀನ್ ಶಾಟ್ ನ್ನು ಲಗತ್ತಿಸಿದ್ದರು.
ಡಬಿರಿಯವರ ಟ್ವೀಟ್ ಗೆ ಬುಧವಾರ ಪ್ರತಿಕ್ರಿಯಿಸಿದ ಕೇಂದ್ರದ ಸಹಾಯಕ ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಸಚಿವ ರಾಜೀವ ಚಂದ್ರಶೇಖರ ಅವರು,ಇದು ಖಾಸಗಿತನದ ಉಲ್ಲಂಘನೆಯಾಗಿದ್ದು,ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
‘ನಾವು ಈ ಬಗ್ಗೆ ತಕ್ಷಣ ಪರಿಶೀಲನೆ ನಡೆಸುತ್ತೇವೆ ಮತ್ತು ಖಾಸಗಿತನದ ಯಾವುದೇ ಉಲ್ಲಂಘನೆಯಾಗಿದ್ದರೆ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಇದೇ ವೇಳೆ,ನೂತನ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆಯು ಸಿದ್ಧಗೊಳ್ಳುತ್ತಿದೆ ’ ಎಂದು ಚಂದ್ರಶೇಖರ್ ಟ್ವೀಟಿಸಿದ್ದಾರೆ.
ಮಸೂದೆಯು ನಾಗರಿಕರ ವೈಯಕ್ತಿಕ ದತ್ತಾಂಶಗಳೊಂದಿಗೆ ವ್ಯವಹರಿಸುವ ಎಲ್ಲ ಸಂಸ್ಥೆಗಳಿಗೆ ನಿಯಮಾವಳಿಗಳನ್ನು ಒಳಗೊಂಡಿರಲಿದೆ. ಭಾರತೀಯ ದತ್ತಾಂಶ ಸಂರಕ್ಷಣಾ ಮಂಡಳಿಯ ಸ್ಥಾಪನೆಯನ್ನೂ ಮಸೂದೆಯು ಉದ್ದೇಶಿಸಿದೆ. ಎಲ್ಲ ಸಂಸ್ಥೆಗಳು ನಿಯಮಾವಳಿಗಳನ್ನು ಪಾಲಿಸುವುದನ್ನು ಮಂಡಳಿಯು ಖಚಿತಪಡಿಸಲಿದೆ ಮತ್ತು ಉಲ್ಲಂಘಿಸುವವರಿಗೆ ದಂಡಗಳನ್ನು ವಿಧಿಸಲಿದೆ.
ಈ ನಡುವೆ ಡಬಿರಿಯವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ವಾಟ್ಸ್ಆ್ಯಪ್,ಸಮಸ್ಯೆಯು ಅವರ ಸ್ಮಾರ್ಟ್ ಫೋನ್ ನಲ್ಲಿಯ ಆ್ಯಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿನ ದೋಷಕ್ಕೆ ಸಂಬಂಧಿಸಿರುವ ಹೆಚ್ಚಿನ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಮತ್ತು ದೋಷವನ್ನು ನಿವಾರಿಸುವಂತೆ ಗೂಗಲ್ಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.