Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಉಡುಪಿ: ಮತದಾನಕ್ಕೆ ಜಿಲ್ಲೆಯಲ್ಲಿ ಭಾರೀ...

ಉಡುಪಿ: ಮತದಾನಕ್ಕೆ ಜಿಲ್ಲೆಯಲ್ಲಿ ಭಾರೀ ಉತ್ಸಾಹ ತೋರಿದ ಜನತೆ

ಶಾಂತಿಯುತ, ಸುವ್ಯವಸ್ಥಿತ ಮತದಾನ; ಅಲ್ಲಲ್ಲಿ ಕೈಕೊಟ್ಟ ಮತಯಂತ್ರ

10 May 2023 8:35 PM IST
share
ಉಡುಪಿ: ಮತದಾನಕ್ಕೆ ಜಿಲ್ಲೆಯಲ್ಲಿ ಭಾರೀ ಉತ್ಸಾಹ ತೋರಿದ ಜನತೆ
ಶಾಂತಿಯುತ, ಸುವ್ಯವಸ್ಥಿತ ಮತದಾನ; ಅಲ್ಲಲ್ಲಿ ಕೈಕೊಟ್ಟ ಮತಯಂತ್ರ

ಉಡುಪಿ, ಮೇ 10:  ರಾಜ್ಯ ವಿಧಾನಸಭಾ ಚುನಾವಣೆಗೆ ಬುಧವಾರ ನಡೆದ ಮತದಾನ ಉಡುಪಿ ಜಿಲ್ಲ್ಲೆಯಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಜಿಲ್ಲೆಯ ಯಾವುದೇ ಮತಗಟ್ಟೆಯಿಂದ ಯಾವುದೇ ಅಹಿತಕರ ಘಟನೆಯ ಮಾಹಿತಿಗಳು ಬಂದಿಲ್ಲ. ಬೆಳಗ್ಗೆ 7:00ಕ್ಕೆ ಮತದಾನ ಪ್ರಾರಂಭಗೊಂಡ ಕ್ಷಣದಿಂದಲೇ ಮತದಾನ ಮಾಡಲು ಜನರು ಭಾರೀ ಆಸಕ್ತಿ ತೋರಿದ್ದರಿಂದ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಸರತಿ ಸಾಲು ಅಪರಾಹ್ನದವರೆಗೂ ಕಂಡುಬಂದವು. 

ಕಾಪು ವಿಧಾನಸಭಾ ವ್ಯಾಪ್ತಿಯ ಪೆರ್ಡೂರು ಗ್ರಾಮದ ಅನಂತಪದ್ಮನಾಭ ದೇವಸ್ಥಾನ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಬೆಳಗ್ಗೆ 9 ಗಂಟೆಯ ವೇಳೆಗೆ ಮತದಾನ ಪ್ರಕ್ರಿಯೆ ಚುರುಕಾಗಿತ್ತು. ಒಟ್ಟು 979 ಮಂದಿ ಮತದಾರರಲ್ಲಿ 118 ಮಂದಿ (ಶೇ.12) ಅದಾಗಲೇ ಮತ ಚಲಾಯಿಸಿದ್ದರು. ಪಕ್ಕದ ಪಕ್ಕಾಲು ಗ್ರಾಮದ ಕಮಲ ಪಕ್ಕಾಲು (80) ತಾನೇ ಬಿರಬಿರನೇ ನಡೆದು ಬಂದು ಮತಗಟ್ಟೆಯೊಳಗೆ ಹೊಕ್ಕು ಮತ ಚಲಾಯಿಸಿದರು. ಅವರಿಗೆ ಮನೆಯಲ್ಲೇ ಮತ ಚಲಾಯಿಸುವ ಅವಕಾಶ ನೀಡಲಾಗಿತ್ತಾದರೂ ಅದನ್ನು ನಿರಾಕರಿಸಿ ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದಾಗಿ ಅವರೊಂದಿಗೆ ಬಂದ ಸಹಾಯಕರು ತಿಳಿಸಿದರು.

ಪೆರ್ಡೂರಿನ ಬಿಎಂ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟೆಯಲ್ಲಿ 1038 ಮತಗಳಿದ್ದು, 10 ಗಂಟೆಗೆ 240 (ಶೇ.23.12) ಮತ ಚಲಾಯಿಸಿದ್ದರು.  ಇಲ್ಲಿ 87 ವರ್ಷದ ಪದ್ಮನಾಭ ಹೆಬ್ಬಾರ್ ಹಾಗೂ 91 ವರ್ಷ ಪ್ರಾಯದ ವನಜ ಶೆಟ್ಟಿ ಇವರು ಮೊಮ್ಮಗ ಹಾಗೂ ಮಗಳೊಂದಿಗೆ ಬಂದು ಮತ ಚಲಾಯಿಸಿದರು. 

ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 11 ಗಂಟೆ ಸುಮಾರಿಗೆ ಒಟ್ಟು 1262 ಮತದಾರರಲ್ಲಿ 325 ಮಂದಿ (ಶೇ.25.75) ಮಂದಿ ಮತ ಚಲಾಯಿಸಿದ್ದರು. ಸಖಿ ಮತಗಟ್ಟೆಯಾಗಿ ಇದನ್ನು ಮತದಾನ ಹಬ್ಬದ ಹಿನ್ನೆಲೆಯಲ್ಲಿ ಆಕರ್ಷಕ ವಾಗಿ ಸಿಂಗರಿಸಲಾಗಿತ್ತು. ಇಲ್ಲಿ ಮಹಿಳೆ ಯರು ಹಾಗೂ ಪುರುಷರ ಉದ್ದನೆ ಸಾಲು ಇದ್ದು, ತಮ್ಮ ಹಕ್ಕನ್ನು ಚಲಾಯಿಸಲು ಎಲ್ಲರೂ ಉತ್ಸುಕರಾಗಿದ್ದಂತೆ ಕಂಡುಬಂತು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿ ಇಲ್ಲಿನ ಮತಗಟ್ಟೆಯ  1230 ಮಂದಿ ಮತದಾರರಲ್ಲಿ 350 ಮಂದಿ ಅದಾಗಲೇ ತಮ್ಮ ಹಕ್ಕು ಚಲಾಯಿಸಿದ್ದರು. ಮೊದಲ ಮತದಾನದ ಹಕ್ಕು ಚಲಾಯಿಸಲು ಗೆಳೆಯರೊಂದಿಗೆ ಬಂದಿದ್ದ ಪ್ರಜ್ವಲ್ ಮನೆಯವರಿಗಿಂತ ಮೊದಲೇ ಮತ ಚಲಾಯಿಸಿ ಖುಷಿಖುಷಿಯಾಗಿ ಗೆಳೆಯ ರೊಂದಿಗೆ ತೆರಳಿದ.

11ಗಂಟೆಗೆ ಶೇ.50 ಮತದಾನ: ನಕ್ಸಲ್‌ಪೀಡಿತ ನಾಡ್ಪಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆ ಹಾಗೂ ಸೋಮೇಶ್ವರ ಜಿಪಂ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಯೋಧರಿಂದ ಸೂಕ್ತ ಭದ್ರತೆ ಒದಗಿಸಲಾಗಿದ್ದು, ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದರು.

ನಾಡ್ಪಾಲು ಮತಗಟ್ಟೆಯಲ್ಲಿ 11ಗಂಟೆಯ ಸುಮಾರಿಗೆ ಶೇ.50ರಷ್ಟು ಮತದಾನವಾಗಿತ್ತು. ಇಲ್ಲಿನ ಒಟ್ಟು 380 ಮತದಾರರಲ್ಲಿ 94 ಪುರುಷರು ಹಾಗೂ 98 ಮಹಿಳೆಯರು ಸೇರಿದಂತೆ 192 ಮಂದಿ ಅದಾಗಲೇ ತಮ್ಮ ಹಕ್ಕನ್ನು ಚಲಾಯಿಸಿದ್ದರು. ಇಲ್ಲಿ 80+ ಪ್ರಾಯದ ಒಟ್ಟು 17 ಮಂದಿ (6 ಪುರುಷರು ಹಾಗೂ 11 ಮಹಿಳೆಯರು) ಹಿರಿಯ ನಾಗರಿಕ ಮತದಾರರಿದ್ದು, ಇವರಲ್ಲಿ ಮೂವರು ಮಾತ್ರ ಮನೆಯಲ್ಲೇ ಅಂಚೆಮತದಾನಕೆ ಸಮ್ಮತ್ತಿಸಿದ್ದು, ಉಳಿದ 14 ಮಂದಿಯಲ್ಲಿ 13 ಮಂದಿ ಅದಾಗಲೇ ಬಂದು ಮತ ಚಲಾಯಿಸಿ ಹೋಗಿದ್ದರು. ಒಬ್ಬ ಹಿರಿಯ ಮಹಿಳೆ ಮಾತ್ರ ಮತ ಹಾಕಲು ಬಾಕಿ ಇತ್ತು.

ಕುಂದಾಪುರ ವಿಧಾನಸಭಾ ವ್ಯಾಪ್ತಿಯ ತೀರಾ ಗ್ರಾಮೀಣ ಒಳಪ್ರದೇಶವಾದ ಶೇಡಿಮನೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇಲ್ಲಿ ಬಿಸಿಲಿನಲ್ಲಿ ದಣಿದು ಮತಗಟ್ಟೆಗೆ ದೂರದಿಂದ ಬರುವ ಮತದಾರರ ದಾಹ ತಣಿಸಲು ಬೆಲ್ಲ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ 1059 ಮತದಾರರಲ್ಲಿ ಅದಾಗಲೇ 460 ಮಂದಿ ಮತ ಚಲಾಯಿಸಿದ್ದರು.

ಅಮಾಸೆಬೈಲಿನಲ್ಲಿ ಉದ್ದನೆಯ ಸಾಲು: ಕುಂದಾಪುರ ಕ್ಷೇತ್ರ ವ್ಯಾಪ್ತಿಗೆ ಬರುವ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಒಂದಾದ ಅಮಾಸೆಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪರಾಹ್ನ 1ಗಂಟೆ ಸುಮಾರಿಗೆ ಪುರುಷರ ಹಾಗೂ ಮಹಿಳೆಯರ ಉದ್ದನೆಯ ಸಾಲು ಕಂಡುಬಂತು.ಅಲ್ಲಿನ ಒಂದು ಮತಗಟ್ಟೆಯಲ್ಲಿ 1110 ಮತದಾರರಿದ್ದು, ಇವರಲ್ಲಿ 403 ಮಂದಿ ಅದಾಗಲೇ ಮತ ಚಲಾಯಿಸಿದ್ದರು. ಇವರಲ್ಲಿ 211 ಪುರುಷರು ಹಾಗೂ 192 ಮಹಿಳೆ ಯರು ಸೇರಿದ್ದರು.

ಅಮಾಸೆಬೈಲ್‌ಗೆ ಪಕ್ಕದ ಮಚ್ಚಟ್ಟು ಗ್ರಾಮ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು, ಇಲ್ಲಿ ಬಿರುಸಿನ ಮತದಾನ ನಡೆಯಿತು. ಇಲ್ಲಿರುವ 1339 ಮತದಾರರ ಪೈಕಿ 262 ಪುರುಷರು ಹಾಗೂ 272 ಮಂದಿ ಮಹಿಳೆಯರು ಸೇರಿ ಒಟ್ಟು 534 ಮಂದಿ ತಮ್ಮ ಮತ ಚಲಾಯಿಸಿದ್ದರು. ಇಲ್ಲಿ ಸಾಕಷ್ಟು ಮಂದಿ ಯುವಕರು ಬೆಂಗಳೂರಿನಿಂದ ಇಂದು ಬೆಳಗ್ಗೆ ಬಂದು ಮತ ಚಲಾಯಿಸಿದ್ದು, ಇವರಲ್ಲಿ ಸುದೀಪ್ ಸೇರಿದಂತೆ ಹಲವರಿಗೆ ಜೀವನದ ಮೊದಲ ಮತದಾನಗಿತ್ತು.

ಕುಂದಾಪುರ ತಾಲೂಕಿನ ಕಾಳಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಖಿ ಮತಗಟ್ಟೆ ಯಾಗಿತ್ತು. ಇದು ಮಹಿಳೆಯರೇ ಕಾರ್ಯ ನಿರ್ವಹಿಸುವ ಪಿಂಕ್ ಮತಗಟ್ಟೆಯಾಗಿತ್ತು. ಮತಗಟ್ಟೆಗೆ ಸಂಬಂಧ ಪಟ್ಟ ಎಲ್ಲಾ ಮಹಿಳೆಯರೂ ಇಲ್ಲಿ ಗುಲಾಬಿ ಬಣ್ಣದ ಉಡುಪು ಧರಿಸಿ ಎಲ್ಲರ ಗಮನ ಸೆಳೆದರು.

ಈ ಮತ ಕೇಂದ್ರದಲ್ಲಿ ಮಹಿಳೆಯರೊಂದಿಗೆ ಬರುವ ಮಕ್ಕಳಿಗೆ ಆಟವಾಡಲು ಪ್ರತ್ಯೇಕ ಕೋಣೆಯಲ್ಲಿ  ಆಟಿಕೆಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಪಿಂಕ್ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ತಮಗೆ ಸಂತಸ ತಂದಿದೆ ಎಂದು ಮತಗಟ್ಟೆಯ ಸಿಬ್ಬಂದಿಗಳು ಹೇಳಿದರು.

ಯಕ್ಷಗಾನ ಮತಗಟ್ಟೆ: ಕೋಟೇಶ್ವರದ ಸರಕಾರಿ ಪದವಿ ಪೂರ್ವ ಕಾಲೇಜು ಮತಗಟ್ಟೆ ಯಕ್ಷಗಾನ ಮತಗಟ್ಟೆ ಯಾಗಿತ್ತು. ಇಲ್ಲಿ ಯಕ್ಷಗಾನದ ಆಕರ್ಷಕ ಕಟೌಟ್‌ಗಳನ್ನು ಹಾಗೂ ವೇಷದ ಸಾಮಗ್ರಿಗಳನ್ನು ಇರಿಸಲಾಗಿತ್ತು. ಚಿತ್ರ ನಟ ರಮೇಶ್ ಅವರ ಯಕ್ಷಗಾನ ವೇಷ ಎಲ್ಲರನ್ನು ಆಕರ್ಷಿಸುವಂತಿತ್ತು. ಈ ಮತಗಟ್ಟೆಯಲ್ಲಿ 767 ಮತದಾರ ಪೈಕಿ 362 ಮಂದಿ ಬಂದು ಮತ ಚಲಾಯಿಸಿದ್ದರು.

ಇದೇ ಕೇಂದ್ರದಲ್ಲಿ ಇನ್ನೊಂದು ಕಡೆ ಯುವ ಮತಗಟ್ಟೆಯನ್ನು ತೆರೆಯಲಾಗಿತ್ತು. 15-20 ಮಂದಿ ಮೊದಲ ಬಾರಿ ಮತ ಚಲಾಯಿಸುವ ಹಕ್ಕು ಪಡೆದ ಯುವ ಮತದಾರರು ಇಲ್ಲಿ ತಮ್ಮ ಹಕ್ಕು ಚಲಾಯಿಸಿದರಲ್ಲಿ ಸೇರಿದ್ದರು. ಮತಗಟ್ಟೆಯಲ್ಲಿ ಒಟ್ಟು 754 ಮತದಾರರಿದ್ದು, 2ಗಂಟೆ ಸುಮಾರಿಗೆ 421 ಮಂದಿ ಮತ ಚಲಾಯಿಸಿದ್ದರು.

ಅಲ್ಲಲ್ಲಿ ಕೈಕೊಟ್ಟ ಮತಯಂತ್ರ

ಜಿಲ್ಲೆಯಲ್ಲಿ ಇಂದು ತುಂಬಾ ಕಡೆಗಳಲ್ಲಿ ಮತಯಂತ್ರ ಕೈಕೊಟ್ಟು ಮತದಾನಕ್ಕೆ ಅಡಚಣೆಯಾದ ವರದಿಗಳು ಬಂದವೆ. ಕಾರ್ಕಳದ ಈದು, ಉಡುಪಿಯ ಬಡಾನಿಡಿಯೂರು, ಕಾಪುವಿನ ಬಡಗುಬೆಟ್ಟು ಮುಂತಾದ ಕಡೆಗಳಲ್ಲಿ ಮತಯಂತ್ರದಿಂದಾಗಿ ಮತದಾನ ವಿಳಂಬವಾಗಿ ಆರಂಭಗೊಂಡಿತ್ತು.

ಅಮಾಸೆಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ  ಮತದಾನ ಪ್ರಾರಂಭಗೊಂಡ ಕ್ಷಣದಲ್ಲೇ ಇವಿಎಂ ಕೊಟ್ಟಿತು. ಇದರಿಂದ 7:00ರಿಂದ 7:38ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿಲ್ಲ. ಮತಯಂತ್ರ ಎರೆಡೆರಡು ಬಾರಿ ಕೈಕೊಟ್ಟಿತು. ತಕ್ಷಣವೇ ತಂತ್ರಜ್ಞರು ಅದನ್ನು ರಿಪೇರಿ ಮಾಡಿದ್ದು, 7:38ರಿಂದ ಮತದಾನ ಪ್ರಾರಂಭಗೊಂಡು ಮುಂದೆ ನಿರಾತಂಕವಾಗಿ ಮತದಾನ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದರು.

ಅದೇ ರೀತಿ ಮಚ್ಚಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿವಿಪ್ಯಾಟ್ ಹಾಳಾಗಿದ್ದು, ಅಂಪಾರಿನಿಂದ ಧಾವಿಸಿ ಬಂದ ತಂತ್ರಜ್ಞರು ಯಂತ್ರವನ್ನು ಬದಲಿಸಿದ ಬಳಿಕ ಮತದಾನ ಮುಂದುವರಿಯಿತು. ಇದರಿಂದ ಸುಮಾರು 20 ನಿಮಿಷ ಮತದಾನ ನಿಂತಿದ್ದು, ನಾವೆಲ್ಲ ಯಂತ್ರ ರಿಪೇರಿಯಾಗುವುದನ್ನು ಕಾಯುತ್ತಾ ನಿಲ್ಲಬೇಕಾ ಯಿತು ಎಂದು ಮತ ಹಾಕಲು ಬಂದ ಗ್ರಾಮಸ್ಥರು ತಿಳಿಸಿದರು.

ಮತಗಟ್ಟೆಗೆ ಬಂದ 80+ಹಿರಿಯ ನಾಗರಿಕರು

80+ ವಯಸ್ಸಿನ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಅವರವರ ಮನೆಯಲ್ಲೇ ಮತ ಚಲಾಯಿಸುವ ಹಕ್ಕನ್ನು ಜಿಲ್ಲಾಡಳಿತದ ಮೂಲಕ ಮಾಡಲಾಗಿತ್ತಾದರೂ, ಕುಂದಾಪುರದಲ್ಲಿ ಅವರ ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ ಎಂದು ಹಲವು ಹಿರಿಯ ಮತದಾರರು ದೂರಿದರು.

ಗ್ರಾಮದ 3-4 ಮಂದಿಯ ಮನೆಗಷ್ಟೇ ಅಧಿಕಾರಿಗಳು ಬಂದು ಹಿರಿಯರಿಂದ ಹಾಗೂ ವಿಕಲಚೇತನರಿಂದ ಮತ ಹಾಕಿಸಿಕೊಂಡಿದ್ದರೂ, ಸಾಕಷ್ಟು ಮನೆಗೆ ಅವರು ಬಂದೇ ಇಲ್ಲ, ಅಥವಾ ದೂರವಾಣಿ ಮಾಡಿ ವಿಚಾರಿಸಿಲ್ಲ ಎಂದು ಅವರು ದೂರಿದರು.

ನಾಡ್ಪಾಲಿನಲ್ಲಿ 14 ಮಂದಿ ಮತಗಟ್ಟೆಗೆ ಬಂದು ಮತ ಚಲಾಯಿಸಿದರೆ, ಅಮಾಸೆಬೈಲಿನಲ್ಲಿ ಎಂಟು ಮಂದಿ ಮತ ಚಲಾಯಿಸಿದರು. ವಿಕಲಚೇತನರಲ್ಲಿ ಹೆಚ್ಚಿನವರಿಗೆ ಮತಗಟ್ಟೆಯಲ್ಲಿ ವೀಲ್‌ಚೇರ್‌ನ ವ್ಯವಸ್ಥೆ ಮಾಡಲಾಗಿತ್ತು. ಅಮಾಸೆಬೈಲಿನಲ್ಲಿ ಮೂವರು ಹಾಗೂ ಮಚ್ಚಟ್ಟಿನಲ್ಲಿ ಐವರು ಇದರ ಪ್ರಯೋಜನ ಪಡೆದರು.

ಪ್ರತಿಯೊಂದು ಚುನಾವಣೆಯಲ್ಲಿ ಮತ ಚಲಾಯಿಸಿದ ಹೆಬ್ಬಾರ್

ಪೆರ್ಡೂರು ಬಿ.ಎಂ.ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಗೆ ಮೊಮ್ಮಗ ದುರ್ಗಾದೀಶ್‌ನ ಸಹಾಯ ದೊಂದಿಗೆ ಪೆರ್ಡೂರು ಕೆಳಪೇಟೆಯಿಂದ ಬಂದು ಮತ ಚಲಾಯಿಸಿದ 87ರ ಹರೆಯ ಪದ್ಮನಾಭ ಹೆಬ್ಬಾರ್ ಇದುವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲೂ ಮತ ಚಲಾಯಿಸಿದ ತೃಪ್ತಿ ಹೊಂದಿದ್ದಾರೆ.

ಪಕ್ಕಾಲಿನ ಗ್ರಾಮೀಣ ಪ್ರದೇಶದಿಂದ ಇದೀಗ ಪೆರ್ಡೂರು ಪೇಟೆಯಲ್ಲೇ ವಾಸವಾಗಿರುವ ಹೆಬ್ಬಾರ್‌ಗೆ ಮನೆಯಲ್ಲೇ ಮತ ಹಾಕುವ ಅವಕಾಶವನ್ನು ನೀಡಿದ್ದರೂ, ಅದನ್ನು ನಿರಾಕರಿಸಿ ಎಂದಿನಂತೆ ಮತಗಟ್ಟೆಗೆ ಬಂದು ಮತ ಚಲಾಯಿಸುವುದಾಗಿ ಹೇಳಿದ್ದರಂತೆ. ಅದರಂತೆ ಇಂದು ಮೊಮ್ಮಗನ ನೆರವಿನಿಂದ ಬಂದು ಮತ ಚಲಾಯಿಸಿದರು.

ಇದು ಎಷ್ಟನೇ ಚುನಾವಣೆ ಎಂಬುದು ನನಗೆ ನೆನಪಿಲ್ಲ. ಆದರೆ ನಾನು ಮತದಾನ ಹಾಕುವ ಅರ್ಹತೆ ಪಡೆದ ಬಳಿಕ ಒಂದೇ ಒಂದು ಚುನಾವಣೆಯನ್ನು ತಪ್ಪಿಸಿಲ್ಲ. ನಮಗೊಂದು ಒಳ್ಳೆಯ ಸರಕಾರ ಬೇಕಲ್ಲ. ಅದಕ್ಕಾಗಿ ತಪ್ಪದೇ ಮತ ಹಾಕುತ್ತೇನೆ ಎಂದರು.

ಕಣ್ಣು ಮಂಜಾದರೂ ಮತಗಟ್ಟೆಯಲ್ಲೇ ಮತ!

ಪೆರ್ಡೂರು ಬಿ.ಎಂ.ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದ ವನಜ ಶೆಟ್ಟಿ ಸಹ ಮತಗಟ್ಟೆಗೇ ಬಂದು ಮತ ಚಲಾಯಿಸುವ ಇಚ್ಛೆಯನ್ನು ವ್ಯಕ್ತಪಡಿಸಿದವರು. 91 ವರ್ಷ ಪ್ರಾಯದ ವನಜ ಹೋಳಿಂಜೆ ಬೀಡುವಿನವರು. ಇವರು ಸಹ ಪ್ರತಿ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ.

ಕಣ್ಣು ಮಂಜಾದರೂ ಈ ಬಾರಿಯೂ ಮಗಳ ಸಹಾಯದಿಂದ ಬಂದು ಮತ ಚಲಾಯಿಸಿದ್ದಾರೆ. ಮತಪತ್ರ ಸರಿಯಾಗಿ ಕಾಣದ ಕಾರಣ ಇವರ ಪರವಾಗಿ ಮಗಳು ಮತಪತ್ರದಲ್ಲಿ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ ಎಂದರು. 

ಮೊದಲ ಬಾರಿ ಮತದಾನದ ಖುಷಿ

ಮುನಿಯಾಲು ಸರಕಾರಿ ಪದವಿ ಕಾಲೇಜಿನಲ್ಲಿ ಮೂರನೇ ವರ್ಷದ ಬಿಕಾಂ ವಿದ್ಯಾರ್ಥಿಯಾಗಿರುವ ಬಲ್ಲಾಡಿಯ ಪ್ರಜ್ವಲ್ ಮೊದಲ ಬಾರಿ ಮತದಾನ ಮಾಡಿದ ಖುಷಿಯಲ್ಲಿದ್ದರು. ಮನೆಯವರಿಗಿಂತ ಮೊದಲೇ ಬಂದು ಅವರು ಮತ ಚಲಾಯಿಸಿರುವುದಾಗಿ ಹೇಳಿಕೊಂಡರು.

ದೇಶದ ನಾಗರಿಕನಾಗಿ ಮತ ಚಲಾಯಿಸುವುದು ತನ್ನ ಹಕ್ಕೆಂದು ಭಾವಿಸಿರುವುದಾಗಿ ಅವರು ಮತ ಹಾಕಿರುವುದಕ್ಕೆ ಕಾರಣ ತಿಳಿಸಿದರು.

ಸೋಮೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲ ಬಾರಿ ಮತ ಚಲಾಯಿಸಿದ ಮತ್ತೊಬ್ಬಾಕೆ ಸ್ವಾತಿ. ಹೆಬ್ರಿ ಕಾಲೇಜಿನಲ್ಲಿ ಎರಡನೇ ವರ್ಷ ಬಿಎ ಓದುತ್ತಿರುವು ಸ್ವಾತಿ ಸೋಮೇಶ್ವರ ದುಂಡಿಯವರು. ಇವರೊಂದಿಗೆ ಇನ್ನೂ ಹಲವ ಮಂದಿ ಗೆಳತಿಯರು ಮೊದಲ ಬಾರಿ ಮತ ಚಲಾಯಿಸಿರುವುದಾಗಿ ಅವರು ತಿಳಿಸಿದರು.

share
Next Story
X