ಕೈಕೊಟ್ಟ ಮತಯಂತ್ರ, ನಿಧಾನಗತಿ ಮತದಾನ: ಮತದಾರರ ಆಕ್ರೋಶ

ಉಡುಪಿ, ಮೇ 10: ಉಡುಪಿ ಜಿಲ್ಲೆಯಲ್ಲಿ ಇಂದು ನಡೆದ ಮತದಾನದ ಸಂದರ್ಭದಲ್ಲಿ ಹಲವು ಮತಗಟ್ಟೆಗಳಲ್ಲಿ ಇವಿಎಂ ಮೆಷಿನ್ ಕೈಗೊಟ್ಟಿದ್ದು, ಕೆಲವು ಕಡೆ ನಿಧನಗತಿಯ ಮತದಾನ ಮತದಾರರ ಆಕ್ರೋಶಕ್ಕೆ ಕಾರಣವಾಯಿತು.
ಬಡಾನಿಡಿಯೂರು ಮತಗಟ್ಟೆಯ ಇವಿಎಂ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಯಿಂದ ದೋಷ ಕಂಡು ಬಂದಿರುವುದರಿಂದ ಮತದಾನ ವಿಳಂವಾಗಿ ಆರಂಭ ಗೊಂಡಿತು. ಬೆಳಗ್ಗೆ 7ಗಂಟೆಗೆ ಆರಂಭವಾಗಬೇಕಾದ ಮತದಾನವು ಯಂತ್ರದಲ್ಲಿನ ಸಮಸ್ಯೆಯಿಂದ 8.30ರ ನಂತರ ಆರಂಭಗೊಂಡಿತು.
ಇದರಿಂದ ಬೆಳಗ್ಗೆ 7ಗಂಟೆಗೆ ಬಂದ ಮತದಾರರು ಮತಗಟ್ಟೆಯಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. ಬಳಿಕ ಸಂಬಂಧಪಟ್ಟವರು ಮತಯಂತ್ರ ದುರಸ್ತಿ ಕಾರ್ಯ ನಡೆಸಿ ಮತದಾನ ನಡೆಯಲು ಅನುವು ಮಾಡಿಕೊಟ್ಟರು. ಅದೇ ರೀತಿ ಉಡುಪಿ ನಗರದ ಬೋರ್ಡ್ ಹೈಸ್ಕೂಲ್, ಕೊರಂಗ್ರಪಾಡಿ ಗ್ರಾಮ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟತಟ್ಟು ಪಡುಕೆರೆ ಮತಯಂತ್ರ ಕೈಕೊಟ್ಟ ಪರಿಣಾಮ ಒಂದು ಗಂಟೆ ವಿಳಂಬವಾಗಿ ಮತದಾನ ಪ್ರಕ್ರಿಯೆ ನಡೆಯಿತು.
ಬೈಂದೂರು ಕ್ಷೇತ್ರದ ಕನ್ಯಾನ ಮತಗಟ್ಟೆಯ ಇವಿಎಂ ಯಂತ್ರದ ಬಳಿ ಬೆಳಕಿನ ಕೊರತೆ ಇದ್ದ ಕಾರಣ, ಯಂತ್ರದಲ್ಲಿನ ಹೆಸರು, ಚಿಹ್ನೆ ಅಸ್ಪಷ್ಟ ಕಾಣಿಸುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು. ಬಳಿಕ ಸಮಸ್ಯೆಯನ್ನು ಸರಿಪಡಿಸಲಾಯಿತು.
ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಬ್ರಹ್ಮಣ್ಯ ನಗರದ ಮತಗಟ್ಟೆಯಲ್ಲಿ ನಿಧಾನಗತಿಯಲ್ಲಿ ಮತದಾನ ನಡೆದಿದ್ದು, ಈ ಬಗ್ಗೆ ಮತದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ಎರಡು ಗಂಟೆಗಳ ಕಾಲ ಕಾದು ಮತ ದಾನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೇ ಪರಿಸ್ಥಿತಿ ಪರ್ಕಳ ಮತಗಟ್ಟೆಯಲ್ಲೂ ನಡೆದಿರುವ ಬಗ್ಗೆ ವರದಿಯಾಗಿದೆ.








