ಮಣಿಪುರ: 11 ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಕೆ

ಇಂಫಾಲ, ಮೇ 10: ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿರುವುದರಿಂದ ಬುಧವಾರ 11 ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಗೊಳಿಸಲಾಗಿದೆ. ಆದರೆ, ಭಾರತೀಯ ಸೇನೆ ಹಾಗೂ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಧ್ವಜ ಮೆರವಣಿಗೆ ನಡೆಸುವುದನ್ನು ಮುಂದುವರಿಸಿದ್ದಾರೆ.
ಮೇಟಿ ಹಾಗೂ ಕುಕಿ ಬುಡಕಟ್ಟುಗಳ ಘರ್ಷಣೆಯಿಂದಾಗಿ ಮಣಿಪುರದ ಹಲವು ಭಾಗಗಳು ಕಳೆದ ಕೆಲವು ದಿನಗಳಿಂದ ಹಿಂಸಾಚಾರಕ್ಕೆ ಸಾಕ್ಷಿಯಾಗಿವೆ. ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ ಹಾಗೂ 30,000 ಜನರು ನಿರಾಶ್ರಿತರಾಗಿದ್ದಾರೆ ಎಂದು ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಸಚಿವ ಸಪಮ್ ರಂಜನ್ ಸಿಂಗ್ ತಿಳಿಸಿದ್ದಾರೆ.
ಇಂಫಾಲ ಪಶ್ಚಿಮ, ಬಿಷ್ಣುಪುರ, ಚುರಾಚಾಂದ್ಪುರ ಹಾಗೂ ಜಿರಿಬಾಮ್ ಸೇರಿದಂತೆ 11 ಜಿಲ್ಲೆಗಳಲ್ಲಿ ಮುಂಜಾನೆ 5 ಗಂಟೆಯಿಂದ 6 ಗಂಟೆಗಳ ಕಾಲ ಕರ್ಫ್ಯೂ ಸಡಿಲಗೊಳಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯ ಕೇಂದ್ರ ಶಸಸ್ತ್ರ ಪೊಲೀಸ್ ಪಡೆಗಳು, ಗಲಭೆ ನಿಯಂತ್ರಣದಲ್ಲಿ ಪರಿಣತಿ ಪಡೆದಿರುವ ಕ್ಷಿಪ್ರ ಕಾರ್ಯಪಡೆ (ಆರ್ಎಎಫ್), ಗಡಿ ಭದ್ರತಾ ಪಡೆ (ಬಿಎಸ್ಎಫ್) ಳೊಂದಿಗೆ ಭಾರತೀಯ ಸೇನೆ ಹಾಗೂ ಅಸ್ಸಾಂ ರೈಫಲ್ಸ್ನ ಸಾವಿರಾರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಸಂದರ್ಭ ಭದ್ರತಾ ಸಿಬ್ಬಂದಿ ಹಾಗೂ ಶಂಕಿತ ಉಗ್ರರ ನಡುವೆ ಘರ್ಷಣೆಗಳು ಕೂಡ ನಡೆದಿವೆ. ಇಂಫಾಲದ ಪೂರ್ವ ಫುಖಾವೊ ಶಾಂತಿಪುರದಲ್ಲಿ ಶಂಕಿತ ಕುಕಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಅಸ್ಸಾಂ ರೈಫಲ್ಸ್ನ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ‘ದಿ ಫ್ರೀ ಇಂಫಾಲ್ ಪ್ರೆಸ್’ ಬುಧವಾರ ವರದಿ ಮಾಡಿದೆ







