ಎಮ್.ಆರ್. ಶಾರನ್ನು ವಿಚಾರಣಾ ಪೀಠದಿಂದ ಹೊರಗಿಡಿ: ಸಂಜೀವ ಭಟ್ ಮನವಿಗೆ ಸುಪ್ರೀಂ ನಕಾರ

ಹೊಸದಿಲ್ಲಿ, ಮೇ 10: 1990ರ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯಿಂದ ನ್ಯಾ. ಎಮ್. ಆರ್. ಶಾರನ್ನು ಹೊರಗಿಡಬೇಕೆಂಬ ಮಾಜಿ ಐಪಿಎಸ್ ಅಧಿಕಾರಿ ಸಂಜೀವ ಭಟ್ರ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ
ಕಸ್ಟಡಿ ಸಾವಿನ ಪ್ರಕರಣದಲ್ಲಿ ತಾನು ದೋಷಿ ಎಂದು ಘೋಷಿಸುವ ತೀರ್ಪನ್ನು ಪ್ರಶ್ನಿಸಿ ಸಂಜೀವ ಭಟ್ ಗುಜರಾತ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆ ಅರ್ಜಿಗೆ ಪೂರಕವಾಗಿ ಹೆಚ್ಚುವರಿ ಸಾಕ್ಷ್ಯವನ್ನು ಸಲ್ಲಿಸಲು ತನಗೆ ಅವಕಾಶ ನೀಡಬೇಕೆಂದು ಕೋರಿ ಅವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ತನ್ನ ಅರ್ಜಿಯ ವಿಚಾರಣೆ ಮಾಡುವ ಸುಪ್ರೀಂ ಕೋರ್ಟ್ ಪೀಠದಲ್ಲಿ ನ್ಯಾ. ಎಮ್.ಆರ್. ಶಾ ಇರಬಾರದು ಎನ್ನುವುದು ಅವರ ಬೇಡಿಕೆಯಾಗಿತ್ತು.
ನ್ಯಾ. ಶಾ ಗುಜರಾತ್ ಹೈಕೋರ್ಟ್ ನ್ಯಾಯಾಧೀಶರಾಗಿದ್ದಾಗ, ಇದೇ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ವೇಳೆ ಅರ್ಜಿದಾರ ಸಂಜೀವ್ ಭಟ್ ವಿರುದ್ಧ ಕಿಡಿಗಾರಿದ್ದರು. ಹಾಗಾಗಿ, ಈಗ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರುವಾಗಲೂ ಅವರಲ್ಲಿ ಆ ಪಕ್ಷಪಾತಿ ಧೋರಣೆ ಇರುತ್ತದೆ ಎನ್ನುವ ಸಕಾರಣ ಭಯವಿದೆ ಎಂದು ಸಂಜೀವ ಭಟ್ರ ವಕೀಲರು ಮಂಗಳವಾರ ವಾದಿಸಿದರು.
ಆದರೆ, ಇದನ್ನು ದೂರುದಾರನಾಗಿರುವ ಗುಜರಾತ್ ಸರಕಾರದ ವಕೀಲ ವಿರೋಧಿಸಿದರು. ‘‘ಇದು ತನಗೆ ಬೇಕಾದ ನ್ಯಾಯಾಧೀಶರಿಂದ ತನ್ನ ಪರವಾದ ತೀರ್ಪು ಪಡೆಯುವ ಅರ್ಜಿದಾರರ ಪ್ರಯತ್ನವಾಗಿದೆ. ಅವರು ಮೊದಲೇ ಯಾಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ’’ ಎಂದು ಪ್ರಶ್ನಿಸಿದರು.
ಎಮ್.ಆರ್. ಶಾರನ್ನು ವಿಚಾರಣೆಯಿಂದ ಹೊರಗಿಡಬೇಕೆಂಬ ಸಂಜೀವ ಭಟ್ರ ಅರ್ಜಿಯನ್ನು ಸ್ವೀಕರಿಸಲು ನ್ಯಾಯಮೂರ್ತಿಗಳಾದ ಎಮ್.ಆರ್. ಶಾ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ಪೀಠವು ನಿರಾಕರಿಸಿತು.
ನ್ಯಾ. ಶಾ ಗುಜರಾತ್ ಹೈಕೋರ್ಟ್ ನ್ಯಾಯಧೀಶರಾಗಿದ್ದಾಗ, ಇದೇ ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರ ಸಂಜೀವ್ ಭಟ್ಗೆ ವಾಗ್ದಂಡನೆ ವಿಧಿಸಿದ್ದರು ಮತ್ತು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದು ಭಟ್ ಪರವಾಗಿ ವಾದಿಸಿದ ಹಿರಿಯ ವಕೀಲ ದೇವದತ್ತ ಕಾಮತ್ ಹೇಳಿದರು.
‘‘ಈ ನ್ಯಾಯಾಲಯಕ್ಕೆ ನಾನು ಅಪಾರ ಗೌರವ ಕೊಡುತ್ತೇನೆ. ಆದರೆ, ನ್ಯಾಯ ಸಿಗುವುದು ಮಾತ್ರವಲ್ಲ, ಸಿಕ್ಕಂತೆ ಕಾಣುವುದು ಕೂಡ ಅಗತ್ಯವಾಗಿದೆ. ನ್ಯಾಯಾಂಗ ಔಚಿತ್ಯದ ಪ್ರಕಾರ, ನೀವು ಅರ್ಜಿಯ ವಿಚಾರಣೆ ನಡೆಸದಿರಬಹುದು’’ ಎಂದು ಕಾಮತ್ ಹೇಳಿದರು. ಇಲ್ಲಿ ಪಕ್ಷಪಾತದ ಸಕಾರಣ ಭಯವಿದೆ ಎಂದರು.







