ಸೂಸೈಡ್ ನೋಟ್ ಆಧಾರದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಹೊರಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್

ಹೊಸದಿಲ್ಲಿ, ಮೇ 10: ಕೇವಲ ಸೂಸೈಡ್ ನೋಟ್ನಲ್ಲಿ ಮಾಡಿರುವ ಆರೋಪಗಳ ಆಧಾರದಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣ ದಾಖಲಿಸಲು ಸಾಧ್ಯವಿಲ್ಲವೆಂದು ಮುಂಬೈನ ನ್ಯಾಯಾಲಯವೊಂದು ಬುಧವಾರ ತಿಳಿಸಿದೆ. ಬಾಂಬೆ ಐಐಟಿ ವಿದ್ಯಾರ್ಥಿ ದರ್ಶನ್ ಸೋಲಂಕಿ ಆತ್ಮಹತ್ಯೆ ಪ್ರಕರಣದಲ್ಲಿ ಅದೇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗೆ ಜಾಮೀನು ಬಿಡುಗಡೆಗೊಳಿಸಿ ನೀಡಿರುವ ಆದೇಶದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಈ ವರ್ಷದ ಫೆಬ್ರವರಿಯಲ್ಲಿ ಮುಂಬೈ ಐಐಟಿ ವಿದ್ಯಾರ್ಥಿ ದರ್ಶನ್ ಸೋಲಂಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅರ್ಮಾನ್ ಖತ್ರಿ ಆತನ ಸಹಪಾಠಿಯಾಗಿದ್ದ. ಖತ್ರಿಗೆ ಸೆಶನ್ಸ್ ನ್ಯಾಯಾಲಯವು ಶನಿವಾರ ಜಾಮೀನು ಬಿಡುಗಡೆಗೊಳಿಸಿತ್ತು. ಆದರೆ ಆದೇಶದ ವಿಸ್ತೃತ ವಿವರಗಳು ಬುಧವಾರ ಲಭ್ಯವಾಗಿದೆ.
ಸೋಲಂಕಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಖತ್ರಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಕ್ರಿಮಿನಲ್ ಬೆದರಿಕೆ ಹಾಗೂ ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳ ( ದೌರ್ಜನ್ಯಗಳ ತಡೆ) ಕಾನೂನುಗಳಡಿ ಪ್ರಕರಣ ದಾಖಲಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಎ.ಪಿ. ಕಾನಡೆ ಅವರು , ಖತ್ರಿಯು ಸೋಲಂಕಿಗೆ ಜಾತಿ ವಿಚಾರದಲ್ಲಿ ಕಿರುಕುಳ ನೀಡಿದ್ದನೆಂಬುದಕ್ಕೆ ಯಾವುದೇ ಆಧಾರವಿಲ್ಲವೆಂದು ತಿಳಿಸಿದ್ದಾರೆೆ. ಪೇಪರ್ ತುಂಡೊಂದರಲ್ಲಿ ಆರ್ಮಾನ್ ಖತ್ರಿಯ ಹೆಸರನ್ನು ಉಲ್ಲೇಖಿಸಿರುವುದು ಬಿಟ್ಟರೆ, ಆತ ಸೋಲಂಕಿಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾನೆ ಎಂಬುದಕ್ಕೆ ಯಾವುದೇ ಆಧಾರವಿಲ್ಲವೆಂದು ಅವರು ಹೇಳಿದ್ದಾರೆ.







