ರಕ್ಷಣೆಗಿದ್ದ ವ್ಯವಸ್ಥೆಯ ವೈಫಲ್ಯವೇ ಕಾರಣ: ಯುವ ವೈದ್ಯೆಯ ಹತ್ಯೆಗೆ ಕೇರಳ ಹೈಕೋರ್ಟ್ ಕಿಡಿ

ತಿರುವನಂತಪುರಂ: ಕೇರಳದಲ್ಲಿನ ಯುವ ವೈದ್ಯೆಯ ಹತ್ಯಾ ಪ್ರಕರಣವು ರಾಜ್ಯ ಹೈಕೋರ್ಟ್ ಹಾಗೂ ಭಾರತೀಯ ವೈದ್ಯಕೀಯ ಒಕ್ಕೂಟದ ತೀಕ್ಷ್ಣ ಪ್ರತಿಕ್ರಿಯೆಗೆ ಗುರಿಯಾಗಿದ್ದು, ಇಂತಹ ಘಟನೆಯು ವ್ಯವಸ್ಥೆಯ ಬಗೆಗಿನ ಯುವ ವೈದ್ಯರ ನಂಬಿಕೆಯನ್ನು ನಾಶಗೊಳಿಸಬಹುದು ಎಂದು ಕೇರಳ ಹೈಕೋರ್ಟ್ ಹೇಳಿದೆ ಎಂದು indianexpress.com ವರದಿ ಮಾಡಿದೆ.
ಈ ಸಂಬಂಧ ನಡೆದ ವಿಶೇಷ ವಿಚಾರಣೆಯ ನಂತರ ಗುರುವಾರ ಬೆಳಗ್ಗೆ ಈ ಕುರಿತು ವರದಿ ಸಲ್ಲಿಸಬೇಕು ಹಾಗೂ ಆನ್‌ಲೈನ್ ವಿಚಾರಣೆಗೆ ಹಾಜರಿರಬೇಕು ಎಂದು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ವಿಭಾಗೀಯ ಪೀಠವು ಸೂಚಿಸಿದೆ. ಈ ನಡುವೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಭಾರತೀಯ ವೈದ್ಯಕೀಯ ಒಕ್ಕೂಟವು, ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಆರೋಗ್ಯ ಸೇವಾ ವೃತ್ತಿನಿರತರನ್ನು ರಕ್ಷಿಸಲು ಕಾನೂನನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದೆ.
ಗುರುವಾರ ಶಾಲಾ ಶಿಕ್ಷಕನೊಬ್ಬನಿಂದ ಅಮಾನುಷವಾಗಿ ಚೂರಿ ಇರಿತಕ್ಕೆ ಒಳಗಾಗಿ ಹತ್ಯೆಗೀಡಾದ ವೈದ್ಯೆ ವಂದನಾ ದಾಸ್ ಅವರ ಪ್ರಕರಣವನ್ನು ಉಲ್ಲೇಖಿಸಿದ ನ್ಯಾ. ದೇವನ್ ರಾಮಚಂದ್ರನ್ ಹಾಗೂ ಡಾ. ಕೌಸರ್ ಎಡಪ್ಪಾಗತ್ ಅವರನ್ನೊಳಗೊಂಡ ವಿಭಾಗೀಯ ಪೀಠವು, "ಈ ಮುನ್ನ ಇಂತಹ ಪ್ರಕರಣಗಳನ್ನು ಪರಿಗಣಿಸಿದಾಗಲೆಲ್ಲ ಸಂಬಂಧಿತ ಪ್ರಾಧಿಕಾರಗಳಿಗೆ ನಿರಂತರವಾಗಿ ಮತ್ತು ಸ್ಥಿರವಾಗಿ ನಾವು ಭಯ ಪಡುತ್ತಿದ್ದ ಮತ್ತು ಎಚ್ಚರಿಸುತ್ತಿದ್ದ ಘಟನೆಯೇ ಈಗ ನಡೆದಿದೆ ಎಂದು ಹೇಳಬೇಕಾಗಿ ಬಂದಿದೆ. ಈ ಆಘಾತಕಾರಿ ಘಟನೆಯಿಂದ ವ್ಯವಸ್ಥೆಯ ಬಗೆಗಿನ ನಂಬಿಕೆ ನಾಶವಾಗುತ್ತದೆ. ಮುಖ್ಯವಾಗಿ ಯುವ ವಿದ್ಯಾರ್ಥಿಗಳು ಹಾಗೂ ಸ್ಥಾನಿಕ ಶಸ್ತ್ರಚಿಕಿತ್ಸಕರಲ್ಲಿ. ಹೀಗಾಗಿ ಇದು ಆಗದಂತೆ ಖಾತ್ರಿಗೊಳಿಸುವುದು ನಮ್ಮ ಕರ್ತವ್ಯವಾಗಿದೆ" ಎಂದು ಅಭಿಪ್ರಾಯ ಪಟ್ಟಿದೆ.







