8 ದಿನ ಎನ್ಎಬಿ ಕಸ್ಟಡಿಗೆ ಇಮ್ರಾನ್ ಖಾನ್: ಮಾಜಿ ವಿದೇಶಾಂಗ ಸಚಿವ ಖುರೇಶಿ ಬಂಧನ

ಇಸ್ಲಮಾಬಾದ್, ಮೇ 10: ಕಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರನ್ನು 8 ದಿನ ‘ನ್ಯಾಷನಲ್ ಅಕೌಂಟೆಬಿಲಿಟ ಬ್ಯೂರೊ’(ಎನ್ಎಬಿ)ದ ಕಸ್ಟಡಿಗೆ ವಹಿಸಲಾಗಿದೆ ಎಂದು ಎಎಫ್ಪಿ ಸುದ್ಧಿಸಂಸ್ಥೆ ಬುಧವಾರ ವರದಿ ಮಾಡಿದೆ.
ಇಮ್ರಾನ್ಗೆ ಎಂಟು ದಿನಗಳ ದೈಹಿಕ ರಿಮಾಂಡ್ ವಿಧಿಸುವ ಕೋರಿಕೆಗೆ ನ್ಯಾಯಾಲಯ ಸಮ್ಮತಿಸಿದೆ ಎಂದು ಇಮ್ರಾನ್ ಅವರ ವಕೀಲ ಅಲಿ ಬುಖಾರಿ ಹೇಳಿದ್ದಾರೆ. ಇದಕ್ಕೂ ಮುನ್ನ, ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ನ್ಯಾಯಾಲಯವು ಇಮ್ರಾನ್ ಖಾನ್ ವಿರುದ್ಧ ದೋಷಾರೋಪಣೆ ಮಾಡಿದೆ. 2018ರಿಂದ 22ರವರೆಗೆ ಪ್ರಧಾನಿಯಾಗಿದ್ದ ಸಂದರ್ಭ ಸರಕಾರದ ಪ್ರತಿನಿಧಿಯಾಗಿ ಪಡೆದ ಉಡುಗೊರೆಗಳನ್ನು ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ತನಗೆ ಚಿತ್ರಹಿಂಸೆ ನೀಡಿದ್ದು ವಾಷ್ರೂಂ ಬಳಸಲೂ ಅವಕಾಶ ನೀಡಿಲ್ಲ ಎಂದು ನ್ಯಾಯಾಲಯದಲ್ಲಿ ಇಮ್ರಾನ್ ಹೇಳಿಕೆ ನೀಡಿದರು. ಬಳಿಕ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮೇ 17ಕ್ಕೆ ನಿಗದಿಗೊಳಿಸಿದೆ.
ಈ ಮಧ್ಯೆ, ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ, ಇಮ್ರಾನ್ ಖಾನ್ ಅವರ ನಿಕಟವರ್ತಿ ಶಾ ಮಹ್ಮೂದ್ ಖುರೇಶಿಯನ್ನು ಬುಧವಾರ ಇಸ್ಲಮಾಬಾದ್ನಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಖುರೇಶಿಯನ್ನು ಬಂಧಿಸಲಾಗಿದೆ. ಜತೆಗೆ, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಪ್ರಧಾನ ಕಾರ್ಯದರ್ಶಿ ಅಸದ್ ಉಮರ್ರನ್ನೂ ಬಂಧಿಸಲಾಗಿದೆ. ಪಿಟಿಐನ ಮತ್ತೊಬ್ಬ ಮುಖಂಡ ಫವಾದ್ ಚೌಧರಿಯನ್ನು ಬಂಧಿಸುವ ಪ್ರಯತ್ನವೂ ಮುಂದುವರಿದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪಿಟಿಐ ಮುಖಂಡರನ್ನು ಬಂಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
►ಬಲೂಚಿಸ್ತಾನದಲ್ಲಿ ಸೇನೆ ನಿಯೋಜನೆ
ಇಮ್ರಾನ್ ಖಾನ್ ಬೆಂಬಲಿಗರ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪಂಜಾಬ್, ಖೈಬರ್ ಪಖ್ತೂಂಕ್ವಾ ಮತ್ತು ಬಲೂಚಿಸ್ತಾನ ಪ್ರಾಂತದಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.
ಮಂಗಳವಾರ ಇಮ್ರಾನ್ ಬಂಧನದ ಬಳಿಕ ಭುಗಿಲೆದ್ದ ಹಿಂಸಾಚಾರದಲ್ಲಿ ಕನಿಷ್ಟ 7 ಮಂದಿ ಮೃತಪಟ್ಟಿದ್ದು ಸುಮಾರು 300 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 14 ಸರಕಾರಿ ಕಟ್ಟಡಗಳು, ಕಚೇರಿಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಪಂಜಾಬ್, ಲಾಹೋರ್ ಸೇರಿದಂತೆ ಹಲವೆಡೆ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ವರದಿಯಾಗಿದೆ.