ಚೀನಾದೊಂದಿಗಿನ ಸಂಬಂಧ ಅತ್ಯಂತ ಜಟಿಲವಾಗಿದೆ: ಅಮೆರಿಕ

ವಾಷಿಂಗ್ಟನ್, ಮೇ 10: ಅಮೆರಿಕವು ಚೀನಾದೊಂದಿಗೆ ಅತ್ಯಂತ ಸಂಕೀರ್ಣ ಮತ್ತು ಸಾಂದರ್ಭಿಕ ಸಂಬಂಧವನ್ನು ಹೊಂದಿದೆ ಮತ್ತು ಎರಡೂ ದೇಶಗಳ ನಡುವಿನ ಮಾತುಕತೆ ಅತ್ಯಂತ ಪ್ರಮುಖ ವಿಷಯವಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.
ತಮ್ಮ ಸಂವಹನ ಮಾರ್ಗಗಳನ್ನು ಸ್ಥಾಪಿಸಿ ಬಲಪಡಿಸುವುದು ಎರಡೂ ದೇಶಗಳ ಹಿತಾಸಕ್ತಿಗೆ ಪೂರಕವಾಗಿದೆ. ಇದನ್ನು ನಾವು ಮಾಡಬೇಕೆಂಬುದು ವಿಶ್ವದ ಇತರ ದೇಶಗಳು ನಿರೀಕ್ಷಿಸುತ್ತವೆ. ಇದನ್ನೇ ಬೀಜಿಂಗ್ನಲ್ಲಿರುವ ನಮ್ಮ ಸಹೋದ್ಯೋಗಿಗಳಿಗೆ ನಾವು ತಿಳಿಸಿದ್ದೇವೆ.
ಆದರೆ ಅದಕ್ಕಿಂತ ಹೊರತಾಗಿ, ನಮ್ಮ ಸಂವಹನ ಮಾರ್ಗವನ್ನು ಸ್ಥಾಪಿಸಿ ಬಲಪಡಿಸುವುದು ಉಭಯ ದೇಶಗಳ ಹಿತಾಸಕ್ತಿಗೆ ಪೂರಕವಾಗಿದೆ. ಮತ್ತು ಎರಡೂ ದೇಶಗಳ ನಡುವೆ ಆಳವಾದ ಭಿನ್ನಾಭಿಪ್ರಾಯವಿದೆ. ಈ ಭಿನ್ನಾಭಿಪ್ರಾಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಮೂಲಕ ಪೈಪೋಟಿಯು ಸಂಘರ್ಷದ ರೂಪಕ್ಕೆ ತಿರುಗದಂತೆ ತಡೆಯುವ ಜವಾಬ್ದಾರಿ ನಮ್ಮ ಮೇಲಿದೆ. ತೈವಾನ್ ಜಲಸಂಧಿಯಾದ್ಯಂತ ಶಾಂತಿ ಮತ್ತು ಸ್ಥಿರತೆಯನ್ನು ಖಾತರಿಪಡಿಸುವುದು, ದೊಡ್ಡ ಸವಾಲುಗಳನ್ನು ಪರಿಹರಿಸಲು ಒಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಬ್ಲಿಂಕೆನ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಇದೇ ಸಂದರ್ಭ ಮಾತನಾಡಿದ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವೆರ್ಲಿ ‘ ಬೀಜಿಂಗ್ನಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ನಾವು ಚೀನಾದೊಂದಿಗೆ ನೇರವಾಗಿ , ದೃಢವಾಗಿ, ನಿಯಮಿತವಾಗಿ ತೊಡಗಿಸಿಕೊಳ್ಳಬೇಕು. ಮತ್ತು ಇಡೀ ಜಗತ್ತಿಗೆ ಪ್ರಯೋಜನವಾಗುವ ರೀತಿಯಲ್ಲಿ ತೈವಾನ್ ಜಲಸಂಧಿಯಾದ್ಯಂತ ಶಾಂತಿಯನ್ನು ಕಾಪಾಡಿಕೊಳ್ಳಬೇಕು’ ಎಂದರು.