ಉಕ್ರೇನ್: ಕ್ಷಿಪಣಿ ದಾಳಿಯಲ್ಲಿ ಎಎಫ್ಪಿ ಪತ್ರಕರ್ತ ಮೃತ್ಯು

ಕೀವ್, ಮೇ 10: ಪೂರ್ವ ಉಕ್ರೇನ್ನ ಚಾಸಿವ್ ಯಾರ್ ಪ್ರದೇಶದಲ್ಲಿ ಮಂಗಳವಾರ ಕ್ಷಿಪಣಿ ದಾಳಿಯಲ್ಲಿ ಎಎಫ್ಪಿ ಸುದ್ಧಿಸಂಸ್ಥೆಯ ಉಕ್ರೇನ್ ಪ್ರತಿನಿಧಿ ಅರ್ಮಾನ್ ಸಾಲ್ದಿನ್ ಮೃತಪಟ್ಟಿರುವುದಾಗಿ ವರದಿಯಾಗಿದೆ.
ರಶ್ಯ- ಉಕ್ರೇನ್ ನಡುವೆ ತೀವ್ರ ಸಂಘರ್ಷ ನಡೆಯುತ್ತಿರುವ ಬಾಖ್ಮಟ್ ನಗರದ ಬಳಿ ಮಂಗಳವಾರ ಸಂಜೆ ರಾಕೆಟ್ ದಾಳಿ ನಡೆದಿದೆ. ಆಗ ಎಎಫ್ಪಿ ಮಾಧ್ಯಮ ಸಂಸ್ಥೆಯ ತಂಡವು ಉಕ್ರೇನ್ ಯೋಧರ ಜತೆಗಿತ್ತು. ರಾಕೆಟ್ ದಾಳಿಯಲ್ಲಿ 32 ವರ್ಷದ ಸಾಲ್ದಿನ್ ಮೃತಪಟ್ಟರು. ಉಳಿದವರು ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ ಎಂದು ಎಎಫ್ಪಿ ಸಂಸ್ಥೆಯ ಅಧ್ಯಕ್ಷ ಫ್ಯಾಬ್ರಿಸ್ ಫ್ರಿಯಾಸ್ ಹೇಳಿದ್ದಾರೆ.
ಪತ್ರಕರ್ತ ಅರ್ಮಾನ್ ಅತ್ಯಂತ ಧೈರ್ಯದಿಂದ ತನ್ನ ಕರ್ತವ್ಯ ನಿಭಾಯಿಸುತ್ತಿದ್ದರು ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಸಂತಾಪ ಸಂದೇಶದಲ್ಲಿ ಶ್ಲಾಘಿಸಿದ್ದಾರೆ. ರಶ್ಯನ್ ಕ್ಷಿಪಣಿ ದಾಳಿಯಿಂದ ಹತರಾದ ಅರ್ಮಾನ್ ಸತ್ಯದ ಬಗ್ಗೆ ವಿಶ್ವಕ್ಕೆ ತಿಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ಪರಂಪರೆ ಹಾಗೂ ಆದರ್ಶ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದು ಉಕ್ರೇನ್ನ ರಕ್ಷಣಾ ಇಲಾಖೆ ಟ್ವೀಟ್ ಮಾಡಿದೆ.