Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕರ್ನಾಟಕದ ಚುನಾವಣೆ-ವರ್ತಮಾನ ಮತ್ತು...

ಕರ್ನಾಟಕದ ಚುನಾವಣೆ-ವರ್ತಮಾನ ಮತ್ತು ಭವಿಷ್ಯ

11 May 2023 12:22 AM IST
share

ಫಲಿತಾಂಶವು ಅನೇಕರ ರಾಜಕೀಯ ಬದುಕನ್ನು ನಿರ್ಣಯಿಸಬಹುದು. ಪಕ್ಷಗಳ ಮತ್ತು ಕೊನೆಗೆ ರಾಜ್ಯದ ಭವಿಷ್ಯವನ್ನೂ ನಿರ್ಧರಿಸಬಹುದು. ಮತಪೆಟ್ಟಿಗೆಯು 'ಪಂಡೋರಾ ಪೆಟ್ಟಿಗೆ'ಯಾಗದೆ ಮತದಾರನ ಆಶಯದ ಪೆಟ್ಟಿಗೆಯಾಗಿರಲಿ; 'ಮತ', 'ಧರ್ಮ'ಗಳ ಸಂಕುಚಿತ ಅರ್ಥವನ್ನು ಮೀರಿದ ಆಶಯವನ್ನು ಬಿಡುಗಡೆಗೊಳಿಸಲಿ. ಕೊನೆಗೂ ಆಯ್ಕೆಯಾದವರ ಯೋಗ್ಯತೆಯು ಆರಿಸಿದವರ ಯೋಗ್ಯತೆಗನುಸಾರವಾಗಿರುತ್ತದೆ. ಫಲಿತಾಂಶವು ಪರಿಣಾಮವನ್ನೂ ನಿರ್ಧರಿಸಬಲ್ಲುದು.


ಬಹಳಷ್ಟು ನಿರೀಕ್ಷೆ, ಅಪೇಕ್ಷೆಗಳನ್ನಿರಿಸಿಕೊಂಡ ಕರ್ನಾಟಕ ವಿಧಾನಸಭಾ ಚುನಾವಣೆ ಕಳೆದಿದೆ. ಈಗ ಏನಿದ್ದರೂ ಫಲಿತಾಂಶಕ್ಕೆ ಕಾಯುವ ಘಳಿಗೆಗಳು. ಒಂದು-ಒಂದೇ ರಾಜ್ಯದ ಚುನಾವಣೆ ದೇಶದ ಗಮನ ಸೆಳೆದದ್ದು ಇದೇ ಮೊದಲೆಂದಲ್ಲ. ಆದರೆ ಹೀಗೆ ರಾಜ್ಯವಿಡೀ ಒಂದೇ ದಿನ ಚುನಾವಣೆ ನಡೆದದ್ದು ಮತ್ತು ಕರ್ನಾಟಕವೊಂದೇ ಚುನಾವಣೆಯನ್ನು ಎದುರಿಸಿದ್ದು ನನಗೆ ನೆನಪಿದ್ದಂತೆ ಇಲ್ಲ; ಇದ್ದರೂ ವಿರಳ; ಅಪರೂಪದ ಅಪವಾದ. ಇದಿಷ್ಟೇ ಆಗಿದ್ದರೂ ಇದೂ ಒಂದು ಚುನಾವಣೆಯೆನ್ನಬಹುದಿತ್ತು. ಆದರೆ ಇದು ದಕ್ಷಿಣ ಭಾರತಕ್ಕೆ ಸವಾಲೆಂಬ ಚುನಾವಣೆ. ಹಿಂದೆ ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷವು ಪದಗ್ರಹಣ ಮಾಡಿದ ರಾಜ್ಯ ಕರ್ನಾಟಕ. ಇದೊಂದು ಹೊಸ ಶಕೆಯೆಂಬಂತೆ ಆಗಿನ ವಾತಾವರಣವಿತ್ತು. ಸಾಲದ್ದಕ್ಕೆ ಅದಕ್ಕೆ ಪೂರಕವಾಗಿ ಲೋಕಸಭಾ ಚುನಾವಣೆ ನಡೆದಾಗಲೂ ಬಹುಸಂಖ್ಯೆಯ ಸಂಸದರನ್ನು ಕಳುಹಿಸಿ ಕರ್ನಾಟಕದ ಭಾಜಪವು ಐತಿಹಾಸಿಕ ಕೊಡುಗೆಯನ್ನು ನೀಡಿತ್ತು. ಆದರೂ ಭಾರತೀಯ ಜನತಾ ಪಕ್ಷಕ್ಕೆ ದಕ್ಷಿಣ ಭಾರತದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಕಾಲಿಡಲು ತೆರಪಿಲ್ಲದಾಗಿತ್ತು.
ಇದೊಂದು ಸೋಜಿಗದ ವಿಚಾರವೂ ಹೌದು. ಗಡಿಗಳು ಅಕ್ಷಾಂಶ-ರೇಖಾಂಶಗಳಂತೆ ಕೃತಕ ವಿಭಜನೆಯೆಂದು ನಾವೆಷ್ಟೇ ಹೇಳಿದರೂ ಅವು ತರಬಲ್ಲ ಅಂತರಗಳು ಅಪಾರ. ಇದಕ್ಕೇನು ಕಾರಣವೆಂಬ ಅಧ್ಯಯನಗಳು ಒಂದು ಸಂಶೋಧನಾ ಪ್ರಬಂಧಕ್ಕೆ ಸಾಕು. ದಕ್ಷಿಣ ಭಾರತದ ಈ ಇತರ ರಾಜ್ಯಗಳಲ್ಲೆಲ್ಲ ಪ್ರಾದೇಶಿಕ ಅಸ್ಮಿತೆಯೇ ಹೆಚ್ಚು ದುಡಿದಂತೆ ಮೇಲ್ನೋಟಕ್ಕೆ ಕಾಣುತ್ತದೆ. ಎಡಪಕ್ಷಗಳು ಒಟ್ಟಾಗಿ ರಾಷ್ಟ್ರೀಯ ಎನಿಸಿಕೊಂಡರೂ ಅವೀಗ ಸಕ್ರಿಯವಾಗಿ ಅಂದರೆ ಅಧಿಕಾರದ ಸ್ಪರ್ಧೆಯಲ್ಲಿರುವುದು ಕೇರಳದಲ್ಲಿ ಮಾತ್ರ. ಒಂದರ್ಥದಲ್ಲಿ ಅವೂ ಈಗ ಪ್ರಾದೇಶಿಕ ಪಕ್ಷಗಳೇ. ಇತರೆಡೆಗಳಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ವೈಭವ. ಕರ್ನಾಟಕದಲ್ಲಿಯೂ ಜೆಡಿಎಸ್ ಎಂಬ ಪ್ರಾದೇಶಿಕ ಪಕ್ಷವಿದೆಯಾದರೂ ಅದು ಕನ್ನಡ ಅಸ್ಮಿತೆಯ ಪ್ರತಿನಿಧಿಯಾಗುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ಗಿಂತಲೂ ಬಿಗಿಯಾದ ಕುಟುಂಬ ರಾಜಕಾರಣವನ್ನು ಅದು ಹೊಂದಿದೆ. ಒಕ್ಕಲಿಗರನ್ನು ಅದು ಕೇಂದ್ರೀಕರಿಸಿದಷ್ಟು ಇತರ ಪಕ್ಷಗಳು ಕೇಂದ್ರೀಕರಿಸಿಲ್ಲ. ಈ ಒಂದು ಕುಟುಂಬ, ಒಂದು ಜಾತಿ ಸಮೀಕರಣವನ್ನು ಹೊರಗಿಟ್ಟರೆ ಅದರಷ್ಟು ಧರ್ಮಾತೀತವಾಗಿ ಉಳಿದ ಪಕ್ಷಗಳು ವ್ಯವಹರಿಸಿವೆಯೆಂದು ಅನ್ನಿಸುವುದಿಲ್ಲ.

ಅದಕ್ಕಿರುವ ರೈತಾಪಿ ಗುಣಕ್ಕೆ ಕನ್ನಡವೋ ಈ ಮಣ್ಣಿಗೆ ಸಂಬಂಧಿಸಿದ ಇನ್ಯಾವುದಾದರೂ ಲಕ್ಷಣವು ಸೇರಿದ್ದಿದ್ದರೆ ಅದೂ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಗಳಂತೆ ರಾಷ್ಟ್ರೀಯ ಪಕ್ಷಗಳನ್ನು ದೂರವಿರಿಸಲು ಸಾಧ್ಯವಿತ್ತು. ಪ್ರಾಯಃ ಅದು ಯಾವಾಗ ಬೇಕಾದರೂ ಕಾಂಗ್ರೆಸ್ ಇಲ್ಲವೇ ಭಾಜಪ ಪಕ್ಷಗಳೊಂದಿಗೆ ಸೇರಿ ಅಧಿಕಾರ ಹಿಡಿಯುವ ಬೇಲಿಯ ಮೇಲಣ ಎಡಬಿಡಂಗಿ ವರ್ತನೆಯೇ ಅದರ ವಿಕಾಸವನ್ನು ಮಿತಿಗೊಳಿಸಿದೆ. ಕಾಂಗ್ರೆಸ್‌ನಲ್ಲಿ ಎಲ್ಲ ಜಾತಿ-ಧರ್ಮದವರಿದ್ದಾರೆ. ಆದರೂ ಅಲ್ಲಿ ಕೆಲವೇ ಜಾತಿಗಳವರು ಪ್ರಾಧಾನ್ಯ ವಹಿಸಿದಂತಿದೆ. ಹಿಂದುಳಿದವರನ್ನು ಪ್ರತಿನಿಧಿಸಿಯೂ ಅದು ಹಿಂದುಳಿದವರಿಗೆ ಮಣೆಹಾಕುವಲ್ಲಿ ಪ್ರಾಶಸ್ತ್ಯ ನೀಡುವಲ್ಲಿ ನಿರೀಕ್ಷಿಸಿದಷ್ಟು ಯಶಸ್ವಿಯಾಗಿಲ್ಲ. ಖರ್ಗೆ, ಪರಮೇಶ್ವರ್ ಮುಂತಾದ ಧುರೀಣರು ಅಧಿಕಾರ ರಾಜಕಾರಣದಲ್ಲಿ ಹಿಂದುಳಿಯುವುದಕ್ಕೆ ಇದರ ಹೊರತಾಗಿ ಕಾರಣಗಳಿಲ್ಲ.

ಭಾರತೀಯ ಜನತಾ ಪಕ್ಷವು ಮುಖ್ಯವಾಗಿ ಹಿಂದೂ ಬಲಪಂಥೀಯರನ್ನು ಮತ್ತು ಮತೀಯ ಶಕ್ತಿಗಳನ್ನು ಒಳಗೊಂಡ ಪಕ್ಷ. ಮುಸ್ಲಿಮರು ಒಂದೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಾಗಿಲ್ಲದಿರುವುದನ್ನು ಜನರು ಗಮನಿಸದಿರಲಾರರು. ಇಷ್ಟಾಗಿಯೂ ಅದು 'ಅಲ್ಪಸಂಖ್ಯಾತ ಮೋರ್ಚಾ'ವನ್ನು ಹೊಂದಿದೆ. ಈ ವಿರೋಧಾಭಾಸವನ್ನು ಅದು ಹೊಂದಿದ್ದರೂ ಅದನ್ನು ಉಳಿಸಿದ್ದು ಕೇರಳದ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್, ಆಂಧ್ರಪ್ರದೇಶದ ರಾಜ್ಯಪಾಲ ನ್ಯಾಯಮೂರ್ತಿ ನಝೀರ್‌ರಂಥವರು. ಭಾರತದ ಸಂವಿಧಾನದ ಮೂಲಚೌಕಟ್ಟನ್ನು ಅರ್ಥಮಾಡಿಕೊಂಡವರು ಪಕ್ಷವೊಂದರ ಮೂಲಚೌಕಟ್ಟನ್ನು ಅರ್ಥಮಾಡಿಕೊಳ್ಳದಿರುವುದು ದುರಂತ.

ಸದ್ಯ ಕರ್ನಾಟಕದಲ್ಲಿ ಭಾಜಪ ಮತ್ತು ಕಾಂಗ್ರೆಸ್ ನಡುವೆ ತುರುಸಿನ ಸ್ಪರ್ಧೆಯೇರ್ಪಡಲು ಹಲವು ಕಾರಣಗಳಿವೆ. ಹಳೇ ಮೈಸೂರು, ಕರಾವಳಿ, ಉತ್ತರ ಕರ್ನಾಟಕ, ಕೇಂದ್ರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮುಂತಾದ ಭಿನ್ನತೆಗಳನ್ನು ಕಾಲಾನುಕಾಲಕ್ಕೆ ಎಲ್ಲ ಪಕ್ಷಗಳೂ ರೂಪಿಸಿಕೊಂಡಿವೆಯಾದರೂ ಆ ಆಧಾರದಲ್ಲಿ ಯಾವುದೇ ಪ್ರಾಂತೀಯ-ಪ್ರಾದೇಶಿಕ ಸಮೂಹ ರಾಜಕೀಯ ನಡೆದದ್ದು ಗೋಚರಿಸುವುದಿಲ್ಲ. ಕೊನೆಗೂ ಅವು ಬೆಂಗಳೂರಿನ ಅಗತ್ಯಗಳನ್ನು ರೂಪಿಸುವುದಕ್ಕಿರುವ ಪರಿಕರಗಳಂತೆ ಕಾಣುತ್ತವೆ. ಚುನಾವಣೆಯ ಸಂದರ್ಭದ ಮಟ್ಟಿಗೆ ಪ್ರಜೆಯೇ ಪ್ರಭುವೆಂದು ತಿಳಿಯುತ್ತೇವೆ. ಪ್ರಜಾಪ್ರಭುತ್ವದ ಅಳಿವು ಉಳಿವು ಚುನಾವಣೆಯ ಮತಗಳು ನಿರ್ಣಯಿಸುತ್ತವೆಂದು ಹೇಳುತ್ತೇವೆ. ನಿಜಕ್ಕೂ ಹೀಗಿದೆಯೇ? ಇದ್ದರೆ ಸಂತೋಷ. ಆದರೆ ಹೀಗಿಲ್ಲ. ನಮ್ಮ ಚುನಾವಣೆಗಳಿಗೂ ಪ್ರಜಾಪ್ರಭುತ್ವಕ್ಕೂ ಸಂಬಂಧವೇ ಇಲ್ಲ.

ಮೌಲ್ಯಗಳ ಶಿಥಿಲಾವಸ್ಥೆಗೆ ಈ ಮಾದರಿಯ ರಾಜಕಾರಣವು ಒಗ್ಗಿಹೋದಂತಿದೆ. ಹಿಂದೆ ರಾಜಪ್ರಭುತ್ವದಲ್ಲಿ ಅರಸನ ಇಷ್ಟಾನಿಷ್ಟಗಳೇ ಪ್ರಜೆಯ, ಪ್ರಜೆಗಳ ಹಣೆಬರಹವನ್ನು ನಿರ್ಧರಿಸುತ್ತಿದ್ದವು. ರಾಜನ ಧೋರಣೆಯನ್ನು ಒಂದು ಹಂತದ ವರೆಗೆ ರೂಪಿಸಬಲ್ಲ ಹಿರಿಯ ಸಲಹೆಗಾರರ ತಂಡವೊಂದಿತ್ತು. ಅವರ ಅಧಿಕಾರ, ಶಕ್ತಿ ಇವು ಅರಸನ ಆಶಯಕ್ಕೆ ಪಾತ್ರವಾಗಿ ಅಳಿವು ಉಳಿವುಗಳಿಗೆ ಬಾಧ್ಯವಾಗುವುದರಿಂದ ಕೊನೆಗೂ ಅದೊಂದು ಏಕಪಾತ್ರಾಭಿನಯವಾಗುತ್ತಿತ್ತು. ಕೆಲವೊಂದು ಅರಸರು ಸಂಸ್ಕೃತಿ ಪೋಷಕರಾಗಿದ್ದರೆ ಅದರ ಹಿಂದೆ ನೈಜ ಕಲಾಸಕ್ತಿಗಿಂತಲೂ ಹೆಚ್ಚಾಗಿ ಪ್ರತಿಷ್ಠೆ, ವೈಭವ ಇವೇ ಕಾರಣೀಭೂತವಾಗಿದ್ದವು. ಈಗ ಪ್ರಜಾತಂತ್ರದಲ್ಲಿ ನಾವು ಅಧ್ಯಕ್ಷೀಯ ವ್ಯವಸ್ಥೆಯ ಮೂಲಕ ನಮ್ಮ ಆಶಯಕ್ಕನುಗುಣವಾಗಿ ನಮ್ಮ ನಾಯಕನನ್ನು ಆಯ್ಕೆಮಾಡಬಹುದಿತ್ತು.

ನಮ್ಮ ಪ್ರತಿನಿಧಿಯೊಬ್ಬ ನಮ್ಮನ್ನಾಳಬಹುದಿತ್ತು. ಆತನನ್ನು ಕಿತ್ತೊಗೆಯಬಲ್ಲ ನಿಯಮಗಳನ್ನು ರೂಪಿಸಬಹುದಿತ್ತು. ಆದರೆ ಯಾವಾಗ ಬಹುಪಕ್ಷೀಯ ರಾಜಕಾರಣವನ್ನು ಒಪ್ಪಿಕೊಂಡೆವೋ ಆಗಿನಿಂದಲೇ ಬಹುಜನ ಹಿತಾಯಕ್ಕಿಂತ ಸ್ಪರ್ಧಿಗಳ ಪೈಕಿ ಅತೀ ಹೆಚ್ಚು ಸಂಖ್ಯೆಯ ಜನರ ಒಲವಿನ ವ್ಯಕ್ತಿ ಎಲ್ಲರ ಪ್ರತಿನಿಧಿಯಾಗುತ್ತಾನೆ. ವ್ಯಕ್ತಿಯೆಂದು ಹೇಳುವಂತಿಲ್ಲ. ಆತ ಪ್ರತಿನಿಧಿಸುವ ಪಕ್ಷವೇ ಈ ಒಲವಿಗೆ ಆಧಾರವಾಗಿರುತ್ತದೆ. ಸ್ಪರ್ಧಿಗಳು ಹೆಚ್ಚಿದ್ದಷ್ಟೂ ಈ ಆರಿಸಿಕೊಂಡವನ ಪರವಾದ ಸಂಖ್ಯೆ ಒಟ್ಟು ಮತದಾರರ ದಾಮಾಶಯದಲ್ಲಿ ಕಡಿಮೆಯಿರುತ್ತದೆ. ಶೇ. 20-30 ಮತ ಪಡೆದವನು ಉಳಿದ ಸ್ಪರ್ಧಿಗಳ ನಡುವೆ ಹಂಚಿಹೋದ ಶೇ. 80 ಮತದಾರರ ಪ್ರತಿನಿಧಿಯೂ ಆಗುತ್ತಾನೆ. ನಿಜಕ್ಕೂ ಬೇಸರವಾಗುವ ವಿಚಾರವೆಂದರೆ ಪ್ರಜೆಗಳ ಸಂಖ್ಯೆಗೂ ಮತದಾರರ ಸಂಖ್ಯೆಗೂ ಇರುವ ಮತ್ತು ಮತದಾರರ ಸಂಖ್ಯೆಗೂ ಮತ ಚಲಾಯಿಸುವವರ ಸಂಖ್ಯೆಗೂ ಇರುವ ಅಗಾಧ ಅಂತರ. ಹೀಗಾಗಿ 100 ಪ್ರಜೆಗಳ ಪೈಕಿ 80 ಮಾತ್ರ ಮತದಾರರು; 80ರ ಪೈಕಿ 60 ಮಾತ್ರ ಮತ ಚಲಾಯಿಸುವವರು; ಗೆದ್ದ ಅಭ್ಯರ್ಥಿಗೆ ಬಂದಿರುವುದು ಈ ಪೈಕಿ ಶೇ. 20-30 ಮತಗಳು. ಉಳಿದ ಪ್ರಜೆಗಳಿಗೆ ಪ್ರತ್ಯೇಕ ಪ್ರಾತಿನಿಧ್ಯವಿರುವುದಿಲ್ಲ.

ಇನ್ನೂ ತಮಾಷೆಯೆಂದರೆ ಕೆಲವು ಅಭ್ಯರ್ಥಿಗಳು ತಾವು ಗೆಲ್ಲಲಾರರು; ಆದರೆ ಯಾರೋ ಒಬ್ಬ ಗೆಲ್ಲಬಲ್ಲ ಅಭ್ಯರ್ಥಿಯನ್ನು ಸೋಲಿಸಬಲ್ಲರು. ಇದಕ್ಕಾಗಿಯೇ ಪ್ರಮುಖ ಪಕ್ಷಗಳು ಗೆಲ್ಲಬಲ್ಲ ಎದುರಾಳಿಯಿದ್ದರೆ ಆತನಿಗೆ ಸಿಗಬಲ್ಲ ಮತಗಳನ್ನು ವಿಭಜಿಸಬಲ್ಲ ವ್ಯಕ್ತಿಗಳಿಗೆ ಹಣವೋ ಇನ್ಯಾವುದೋ ಆಮಿಷಗಳನ್ನೊಡ್ಡಿ ಅಭ್ಯರ್ಥಿಯಾಗಿಸುತ್ತಾರೆ. ನಮ್ಮ ಬಹುತೇಕ ಮತದಾರರು ಜಾತಿ, ಮತ, ಪಕ್ಷ ಇವುಗಳ ಹೊರತು ಮತ ನೀಡುವುದಿಲ್ಲ. ಯೋಗ್ಯತೆಯೆಂಬುದು ಆದಾಗಲೇ ಮಣ್ಣಡಿಗೆ ಸಂದಿದೆ. ಆದ್ದರಿಂದ ಈ ವಿಭಜನೆಯು ಯಶಸ್ವಿಯಾಗಿದೆ. ಮತದಾರರ ಅಜ್ಞಾನವನ್ನು ಎಷ್ಟು ದೃಢೀಕರಿಸಲಾಗಿದೆಯೆಂದರೆ ಅವರನ್ನು ಗೊಂದಲಕ್ಕೆ ಹಾಕುವ ಸಲುವಾಗಿಯೇ ಮುಖ್ಯ ಎದುರಾಳಿಯ ಹೆಸರಿನ ಅಥವಾ ಅದೇ ಹೆಸರನ್ನು ಹೋಲುವ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಲಾಗುತ್ತದೆ. ಅಮೆರಿಕದಲ್ಲಿ ಎರಡೇ ಪಕ್ಷಗಳಿರುತ್ತವೆಯಾದ್ದರಿಂದ ಜನಪ್ರಾತಿನಿಧ್ಯವು ಬಹುತೇಕ ಪ್ರಜಾತಂತ್ರಕ್ಕನುಸಾರವಾಗಿದೆ. ನಮ್ಮಲ್ಲಿ ಈ ಬಹುಪಕ್ಷ ವ್ಯವಸ್ಥೆಯನ್ನೂ ನಾಚಿಸುವಂತೆ 'ನೋಟಾ'- ಅಂದರೆ ಈ ಯಾರೂ ಬೇಡವೆಂಬ ಆಯ್ಕೆಯೂ ಇದೆ. ಅದರ ಪ್ರಯೋಜನವು ಯಾರಿಗೆ? ಯಾರಿಗೂ ಇಲ್ಲ.

ಅಂತಹ ಆಯ್ಕೆಯನ್ನು ಸರಕಾರವು ನಿಷೇಧಿಸಬೇಕಿತ್ತು. ಬದಲಾಗಿ ಇರುವ ಅವ್ಯವಸ್ಥೆಯನ್ನು ಇನ್ನಷ್ಟು ಗೊಂದಲಮಯವಾಗಿಸಿದೆ. ಮತದಾನ ಬಹಿಷ್ಕಾರಕ್ಕೂ ಇದಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಆಯ್ಕೆಯನ್ನು ಸಂಖ್ಯಾಧಾರಿತವಾಗಿ ಅಳೆಯಬಹುದೇ? ಖಂಡಿತಾ ಇಲ್ಲ. ಜೈಲಿನಲ್ಲಿದ್ದೇ ಗೆಲ್ಲಬಹುದಾದರೆ ಪ್ರಜಾಪ್ರಭುತ್ವ ಯಾಕೆ ಬೇಕು? ಯಾವುದೋ ಊರಿನವನು ಇನ್ಯಾವುದೋ ಊರಿನಲ್ಲಿ ಸ್ಪರ್ಧೆಗಿಳಿಯಬಹುದಾದರೆ ಆ ಕ್ಷೇತ್ರದ ಹಿತಾಸಕ್ತಿ ರಕ್ಷಿತವಾಗಬಹುದೇ? ಇದು ಸ್ಥಳೀಯಸಂಸ್ಥೆಗಳ, ಸಹಕಾರ ಸಂಘಗಳ, ಚುನಾವಣೆಯ ಹೊರತಾಗಿ ಇನ್ನುಳಿದ ಎಲ್ಲ ಸ್ಪರ್ಧೆಗೂ ಅನ್ವಯಿಸುತ್ತವೆ. ಭಾರತದ ಅರ್ಥ ಸಚಿವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದವರು. ಹಾಗೆಂದು ಅವರಿಂದ ಕರ್ನಾಟಕಕ್ಕೆ ಯಾವ ನೆರವೂ ಬಂದಿಲ್ಲ. ಅಷ್ಟೇ ಅಲ್ಲ, ಕರ್ನಾಟಕದಿಂದ ಕೇಂದ್ರಕ್ಕೆ ಸಂದಿರುವ ಜಿಎಸ್‌ಟಿ ಸಂಗ್ರಹಕ್ಕೂ ಅಲ್ಲಿಂದ ಕರ್ನಾಟಕಕ್ಕೆ ಬಂದಿರುವ ಜಿಎಸ್‌ಟಿ ಪಾಲಿಗೂ ಸಂಬಂಧವೇ ಇಲ್ಲ. ಹೀಗಾದರೂ ಅವರೇ ನಮ್ಮ ರಾಜ್ಯದಿಂದ ಆಯ್ಕೆಯಾಗುತ್ತಾರೆ ಏಕೆ? ಕಾರಣ: ಪಕ್ಷ ರಾಜಕಾರಣ. ಸದ್ಯ ಭಾರತವು ವಿಶ್ವದಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದ್ದರೆ ಅದು ತನ್ನ ಜನಸಂಖ್ಯೆಯಲ್ಲಿ. ಸಂಖ್ಯೆಗಳು ಮೌಲ್ಯಾವಲೋಕನದಲ್ಲಿ ಬಲವನ್ನು, ಶಕ್ತಿಯನ್ನು ಪ್ರತಿನಿಧಿಸುವುದಿಲ್ಲವೆಂಬುದು ಸಾಮಾನ್ಯ ಜ್ಞಾನ.

ಆದರೆ ವ್ಯವಹಾರದಲ್ಲಿ ಇವೇ ಮೇಲ್ಮೈಯನ್ನು ನಿರ್ಧರಿಸುತ್ತವೆ. ಕ್ರೀಡೆಯಲ್ಲಿ ಮತ್ತು ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದವರು ಗೆಲ್ಲುತ್ತಾರೆ. ಹಾಗೆಂದು ಅವರೇ ಶ್ರೇಷ್ಠರೆಂದಲ್ಲ. ಈಗ ನಡೆಯುವ ಟಿ-20 ಕ್ರಿಕೆಟ್ ದಿನಬೆಳಗಾದರೆ ಹೊಸ ಹೊಸ ಯಶಸ್ವಿಗಳನ್ನು ಸೃಷ್ಟಿಸುತ್ತದೆ. ಕ್ಷಣಾರ್ಧದಲ್ಲಿ ಅಲ್ಲದಿದ್ದರೂ ಮುಂದಿನ ಪಂದ್ಯದಲ್ಲಿ ಅವರು ಶೂನ್ಯಸಂಪಾದನೆ ಮಾಡುವುದುಂಟು. ಶಿಕ್ಷಣದಲ್ಲಿ ಹೀಗಾಗುವುದು ಕಡಿಮೆ. ಮೊದಲ ದರ್ಜೆಯ ವಿದ್ಯಾರ್ಥಿಯು ಅಲ್ಪಸ್ವಲ್ಪವ್ಯತ್ಯಾಸಗಳೊಂದಿಗೆ ಹೆಚ್ಚುಕಡಿಮೆ ಅದೇ ಹಂತದಲ್ಲಿ ಮುಂದುವರಿಯುತ್ತಾನೆ. ಹೀಗಿರುವಾಗ ಹೆಚ್ಚಿನ ಮತಗಳಿಸಿದವನು ಶ್ರೇಷ್ಠನೆಂದು ಯಾರು ತಿಳಿಯಬೇಕಾಗಿಲ್ಲ. ಹೀಗಾಗಿ ಆಯ್ಕೆಯಾದವರೆಲ್ಲ ಯೋಗ್ಯರು, ಜನಮತದವರು ಎಂದು ತಿಳಿಯಬೇಕಾಗಿಲ್ಲ. ಅವರ ಪಕ್ಷದವರು ಅವರಿಗೆ ಟಿಕೆಟು ನೀಡಿದ್ದಾರೆ. ಅದನ್ನು ಮತದಾರರ ಪೈಕಿ ಹೆಚ್ಚಿನ ಸಂಖ್ಯೆಯವರು ಬೆಂಬಲಿಸಿದ್ದಾರೆ. ಆದ್ದರಿಂದ ಅವರು ನಮ್ಮ ಪ್ರತಿನಿಧಿ; ನಮ್ಮನ್ನಾಳಬಹುದು.

ಸದ್ಯ ಈ ಸಂಖ್ಯಾಧಾರಿತ ಆಯ್ಕೆಯನ್ನು ಮೀರಿದ ಸುಸಂಬದ್ಧ ಆಯ್ಕೆಯಿಲ್ಲ. ಮನುಷ್ಯನ ಬುದ್ಧಿಯೇನಿರಬಹುದು ಎಂಬುದನ್ನು ಅಳೆದವರು ಯಾರು? ಪರಿಣಾಮ-ಫಲಿತಾಂಶಗಳಷ್ಟೇ ಅಳೆಯಬಹುದು- ಅದೂ ಭವಿಷ್ಯದಲ್ಲಿ. ಕರ್ನಾಟಕದ ಜನರು ವಿವೇಕಿಗಳು ಎಂಬ ಮಾತು ಲಾಗಾಯ್ತಿನಿಂದ ಬಂದಿದೆ. ಇದನ್ನು ಅಲ್ಲಗಳೆಯಬಲ್ಲ ಉದಾಹರಣೆಗಳಿವೆ. ಈ ಬಾರಿ ರಾಜಕಾರಣಕ್ಕೆ ಅಸಭ್ಯತೆಯ ಪ್ರವೇಶವೇ ಇದಕ್ಕೆ ಸಾಕ್ಷಿ. ಸೌಹಾರ್ದಯುತವಾಗಿ ನಡೆಯಬೇಕಾಗಿದ್ದ ಚುನಾವಣೆಯು ಧೂಳೆಬ್ಬಿಸುವುದಕ್ಕಿಂತ ಹೆಚ್ಚು ಕೆಸರು- ಮಾತ್ರವಲ್ಲ- ಅಮೇಧ್ಯವನ್ನೂ ಎರಚಿಸಿಕೊಂಡಿದೆ. ನಾಲಗೆಗಳನ್ನು ನಿರ್ಮಾಲ್ಯವೆಂದು ಎಸೆಯಬೇಕಷ್ಟೇ.

ಕಿಷ್ಕಿಂಧೆ ಇಲ್ಲೇ ಇದೆಯೆಂಬುದರಿಂದ ಡಾರ್ವಿನ್ನನ ವಿಕಾಸವಾದವನ್ನು ನಾವು ನಿರಾಕರಿಸಬಹುದು. ಆದರೆ 2023ರ ಈ ರಾಜ್ಯ ಚುನಾವಣೆಯು ಬಹಳಷ್ಟು ಬೆಳಕನ್ನು ಭವಿಷ್ಯದೆಡೆಗೆ ಬೀರಬಹುದು. ಎಲ್ಲರಿಗೂ ಇದು ಮಹತ್ವದ್ದಾಗಿದೆ. 2024ರಲ್ಲಿ ಲೋಕಸಭೆಗೆ ನಡೆಯುವ ಚುನಾವಣೆಗೆ ಇದು ಮುನ್ನುಡಿಯೆಂಬುದನ್ನು ಪ್ರಧಾನಿಯೂ ಅರ್ಥಮಾಡಿಕೊಂಡದ್ದರಿಂದಲೇ ಅವರೂ, ಅವರ ಗೃಹಸಚಿವರೂ ಮಣಿಪುರದ ಕಿಚ್ಚನ್ನು, ದಿಲ್ಲಿಯಲ್ಲಿ ನಡೆಯುತ್ತಿರುವ ನಮ್ಮ ಹೆಮ್ಮೆಯ ಮಹಿಳಾ ಕ್ರೀಡಾಪಟುಗಳ ಮೇಲೆ ನಡೆದಿದೆಯೆನ್ನಲಾದ ಲೈಂಗಿಕ ದೌರ್ಜನ್ಯದ ಬೇಗುದಿಯನ್ನು ಬದಿಗಿಟ್ಟು ಕರ್ನಾಟಕದಲ್ಲೇ ಪೂರ್ಣಾವಧಿ ಬೀಡುಬಿಟ್ಟು ರೋಡ್ ಶೋ ನಡೆಸಿದರು. ಕೋಟಿಕೋಟಿ ರೂ. ವೆಚ್ಚ ನಡೆದ ಮೇಲೆ ಅದಕ್ಕನುಸಾರವಾಗಿ ಫಲಿತಾಂಶವೂ ಭರ್ಜರಿಯಾಗಬೇಕಲ್ಲವೇ?

ಈಗ ನಡೆದ ರಾಜ್ಯ ಚುನಾವಣೆಯ ಮತಪತ್ರಗಳು ಭದ್ರವಾಗಿವೆ; ಫಲಿತಾಂಶದ ವರೆಗೆ ಗೋಪ್ಯವಾಗಿವೆ- ಅಥವಾ ಹಾಗೆಂದು ನಂಬಿಕೊಳ್ಳಬಹುದು. ಇದು ಸಂಶಯದ ಸಂಗತಿಯಲ್ಲ; ಆತಂಕದ ಸಂಗತಿ. ಏಕೆಂದರೆ ಅಜ್ಞಾನದೆದುರು ಏನೂ ನಡೆಯಬಹುದು. ಕಲಬುರಗಿಯಲ್ಲಿ ಮತದಾರಳೊಬ್ಬಳ ಇಚ್ಛೆಗೆ ವಿರುದ್ಧವಾಗಿ ಮತಕೇಂದ್ರದ ಸರಕಾರಿ ಅಧಿಕಾರಿಯೊಬ್ಬ ತನ್ನಿಚ್ಛೆಯ ಪಕ್ಷಕ್ಕೆ ಆಕೆಯ ಮತವನ್ನು 'ದಾನ' ಮಾಡಿದ್ದಾನೆಂದರೆ ಏನೂ ನಡೆಯಬಹುದೆಂದೇ ಅರ್ಥ. ದೇಶದ್ರೋಹವೆಂದರೆ ಪಾಕಿಸ್ತಾನಕ್ಕೆ ರಹಸ್ಯಗಳನ್ನು ಹಸ್ತಾಂತರಿಸುವುದು ಮಾತ್ರವಲ್ಲ; ಪ್ರಜೆಯೊಬ್ಬನ ಆಶಯವನ್ನು ತಲೆಕೆಳಗಾಗಿಸುವುದೂ ದೇಶದ್ರೋಹ.

ಹಾಗೆಯೇ ದೇಶಪ್ರೇಮವೆಂದರೆ ತನ್ನ ಪ್ರೇಮವನ್ನು ಇನ್ನೊಬ್ಬರ ಮೂಲಕ ಪ್ರಕಟಿಸುವುದಲ್ಲ; ಅವರವರ ಇಚ್ಛೆ, ಆಶಯ, ಸ್ವಾತಂತ್ರ್ಯಗಳನ್ನು ರಕ್ಷಿಸುವುದು. ಕನ್ನಡದ ಮಣ್ಣಿನಲ್ಲಿ ಈ ನಡುವಣ ಅವಧಿಯು ಬಿರುಗಾಳಿಯ ಮುಂಚಿನ ಶಾಂತಸ್ಥಿತಿಯಾಗಿ ಉಳಿಯಬಹುದು. ಫಲಿತಾಂಶವು ಅನೇಕರ ರಾಜಕೀಯ ಬದುಕನ್ನು ನಿರ್ಣಯಿಸಬಹುದು. ಪಕ್ಷಗಳ ಮತ್ತು ಕೊನೆಗೆ ರಾಜ್ಯದ ಭವಿಷ್ಯವನ್ನೂ ನಿರ್ಧರಿಸಬಹುದು. ಮತಪೆಟ್ಟಿಗೆಯು 'ಪಂಡೋರಾ ಪೆಟ್ಟಿಗೆ'ಯಾಗದೆ ಮತದಾರನ ಆಶಯದ ಪೆಟ್ಟಿಗೆಯಾಗಿರಲಿ; 'ಮತ', 'ಧರ್ಮ'ಗಳ ಸಂಕುಚಿತ ಅರ್ಥವನ್ನು ಮೀರಿದ ಆಶಯವನ್ನು ಬಿಡುಗಡೆಗೊಳಿಸಲಿ. ಕೊನೆಗೂ ಆಯ್ಕೆಯಾದವರ ಯೋಗ್ಯತೆಯು ಆರಿಸಿದವರ ಯೋಗ್ಯತೆಗನುಸಾರವಾಗಿರುತ್ತದೆ. ಫಲಿತಾಂಶವು ಪರಿಣಾಮವನ್ನೂ ನಿರ್ಧರಿಸಬಲ್ಲುದು.

share
Next Story
X