ಬದುಕಿನ ಜ್ವಾಲೆಗಳನ್ನೇ ಬೆರಳುಗಳಿಂದ ಮುಟ್ಟಿದ ಮಾಂಟೊ
ಇಂದು ಸಾದತ್ ಹಸನ್ ಮಾಂಟೊ ಜನ್ಮದಿನ

ಮಾಂಟೊ ಅವರಿಗೆ ಸಣ್ಣ ಕಥೆಗಳಾದ ಖೋಲ್ ದೋ, ಸೋನಾರೆಲ್, ಮೊಝೈಲ್, ಸರ್ಕಾಂಡೋ ಕೆ ಪೀಚೆ, ಟೋಬಾ ಟೆಕ್ ಸಿಂಗ್, ಟೆಟ್ವಾಲ್ ಕಾ ಕುಟ್ಟಾ ಮತ್ತು ಆಖ್ರಿ ಸೆಲ್ಯೂಟ್ ವ್ಯಾಪಕ ಖ್ಯಾತಿ ತಂದುಕೊಟ್ಟವು. 'ಟೋಬಾ ಟೆಕ್ ಸಿಂಗ್' ಎಂಬ ಅವರ ಸಣ್ಣಕಥೆ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಮೇಲಿನ ಪ್ರಬಲವಾದ ವಿಡಂಬನೆ. ಮುಂಬೈ ಮಾಂಟೊ ಅವರ ನಿರಂತರ ಸ್ಫೂರ್ತಿಯಾಗಿತ್ತು. ಅವರ ಕೃತಿ 'ಬಾಂಬೆ ಸ್ಟೋರೀಸ್' ಮಧ್ಯ ಶತಮಾನದ ಬಾಂಬೆಯ ಒಳಗನ್ನು ತೆರೆದಿಡುತ್ತದೆ. 'ಥಂಡಾ ಗೋಷ್ಟ್' ಕ್ರಿಮಿನಲ್ ಕೋರ್ಟ್‌ನಲ್ಲಿ ಮಾಂಟೊ ವಿಚಾರಣೆ ಎದುರಿಸಿದ ಕಥೆ. 1947ರ ಕೋಮು ಹಿಂಸಾಚಾರದ ಕರಾಳ ವಾಸ್ತವದ ಬಗ್ಗೆ ಹೇಳುತ್ತದೆ. 'ಬಿಟರ್ ಫ್ರುಟ್' ಮಾಂಟೊ ಅವರ ಸಣ್ಣ ಕಥೆಗಳು, ನಾಟಕಗಳು ಮತ್ತು ರೇಖಾಚಿತ್ರಗಳು, ಸಿನೆಮಾ ಕಲಾವಿದರ ರೇಖಾಚಿತ್ರಗಳು ಮತ್ತು ಅಂಕಲ್ ಸ್ಯಾಮ್‌ಗೆ ಕಮ್ಯುನಿಸಂ, ರಶ್ಯ, ವಿಭಜನೆಯ ನಂತರದ ರಾಜಕೀಯ ಮತ್ತು ತಮ್ಮ ಆರ್ಥಿಕ ಸ್ಥಿತಿ ಉಲ್ಲೇಖಿಸಿ ಬರೆದ ಪತ್ರಗಳ ಸಂಗ್ರಹ. 'ಕಿಂಗ್ಡಮ್ಸ್ ಎಂಡ್: ಆಯ್ದ ಕಥೆಗಳು' ಕೃತಿ 1987ರಲ್ಲಿ ಮಾಂಟೊ ಮರಣಾನಂತರ ಪ್ರಕಟವಾಯಿತು. 24 ಸಣ್ಣ ಕಥೆಗಳನ್ನು ಒಳಗೊಂಡಿದೆ.
ಶ್ರೇಷ್ಠ ಬರಹಗಾರ, ನಾಟಕಕಾರ ಸಾದತ್ ಹಸನ್ ಮಾಂಟೊ ಮೇ 11, 1912ರಲ್ಲಿ ಲುಧಿಯಾನಾದ ಸಂಬರಲಾದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಅಂದರೆ ತಮ್ಮ 43ನೇ ವಯಸ್ಸಿಗೆ (ಜನವರಿ 18, 1955) ತೀರಿಕೊಂಡರು. ಆದರೆ ಬದುಕಿನ ಅಲ್ಪಾವಧಿಯಲ್ಲಿ ಅವರು ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ದೊಡ್ಡದು.
ಆ ಕಾಲದ ಸಾಮಾಜಿಕ ರಾಜಕೀಯ ಸನ್ನಿವೇಶ, ಕೋಮುವಾದ ಮತ್ತು ಪ್ರಾದೇಶಿಕ ವಿಭಜನೆಯ ವಾಸ್ತವದಿಂದ ಆಳವಾಗಿ ಪ್ರಭಾವಿತರಾದ ಬರಹಗಾರ ಮಾಂಟೊ ತಮ್ಮ ಜೀವನದ ಕೊನೆಯ ಏಳು ವರ್ಷಗಳಲ್ಲಿ ದೊಡ್ಡ ಆರ್ಥಿಕ ಮತ್ತು ಭಾವನಾತ್ಮಕ ಸಂಕಷ್ಟಗಳನ್ನು ಎದುರಿಸುತ್ತಿರುವಾಗಲೇ ಅವರ ಕೆಲವು ಅತ್ಯುತ್ತಮ ಕೃತಿಗಳು ಬಂದವು.
ಮಾಂಟೋ ಬದುಕು ಕೂಡ ಅವರು ಬರೆದ ಕಥೆಗಳಂತೆಯೇ ಆಸಕ್ತಿದಾಯಕ ಮಾತ್ರವಲ್ಲ, ಸಂಕ್ಷಿಪ್ತವೂ ಆಗಿತ್ತು ಎಂದು ಬಣ್ಣಿಸಲಾಗುತ್ತದೆ. ಉರ್ದು ಕಾವ್ಯದ ಮಾತು ಬಂದಾಗ ಗಾಲಿಬ್ ಹೇಗೋ ಕಥಾ ಪ್ರಕಾರಕ್ಕೆ ಬಂದರೆ ಅಷ್ಟೇ ಎತ್ತರದಲ್ಲಿ ಗುರುತಾಗಿರುವವರು ಮಾಂಟೊ.
ಸಾದತ್ ಹಸನ್ ಮಾಂಟೊ ಜನಿಸಿದ್ದು ಕಾಶ್ಮೀರಿ ಕುಟುಂಬದಲ್ಲಿ. ಅವರ ತಂದೆ ಮೌಲ್ವಿ ಗುಲಾಮ್ ಹುಸೇನ್. ಅವರು ವೃತ್ತಿಯಲ್ಲಿ ನ್ಯಾಯಾಧೀಶರಾಗಿದ್ದರು. ತುಂಬ ಸಿಟ್ಟಿನ ಸ್ವಭಾವದವರಾಗಿದ್ದ ತಂದೆಯ ಪ್ರೀತಿ ಮಾಂಟೊ ಪಾಲಿಗೆ ಸಿಗಲಿಲ್ಲ. ಎರಡು ಬಾರಿ ಮೆಟ್ರಿಕ್ಯುಲೇಷನ್ ಅನುತ್ತೀರ್ಣರಾಗಿ ನಂತರ ತೇರ್ಗಡೆಯಾದರೂ ಉರ್ದುವಿನಲ್ಲಿ ಮಾಂಟೊ ಅನುತ್ತೀರ್ಣರಾಗಿದ್ದರು. ತಂದೆಯ ಕಟ್ಟುನಿಟ್ಟು ಅವರಲ್ಲಿ ಬಂಡಾಯದ ಮನೋಭಾವಕ್ಕೆ ಕಾರಣವಾಯಿತು. ಮೆಟ್ರಿಕ್ಯುಲೇಷನ್ ನಂತರ, ಅಲಿಗಡಕ್ಕೆ ಹೋದರಾದರೂ ಅಲ್ಲಿ ಹೆಚ್ಚು ಕಾಲ ನಿಲ್ಲಲಿಲ್ಲ.
ವಿಕ್ಟರ್ ಹ್ಯೂಗೋ, ಆಸ್ಕರ್ ವೈಲ್ಡ್ ಮತ್ತು ರಶ್ಯದ ಬರಹಗಾರರಾದ ಚೆಕೊವ್ ಮತ್ತು ಗೋರ್ಕಿ ಅವರ ಕೃತಿಗಳನ್ನು ಅನುವಾದಿಸುವ ಮೂಲಕ ಮಾಂಟೊ ಸಾಹಿತ್ಯಿಕ ಬದುಕು ಶುರುವಾಯಿತು. ಅದಕ್ಕೆ ಕಾರಣರಾದವರು ಅಲೆಗ್ ಬಾರಿ ಎಂಬವರು.
ಮಾಂಟೊ ಖಿನ್ನತೆಗೊಳಗಾಗಿದ್ದ ದಿನಗಳಲ್ಲಿ ಒಂದು ದಿನ 'ಮುಸಾವತ್' ನಿಯತಕಾಲಿಕದ ಸಂಪಾದಕ ಅಲೆಗ್ ಬಾರಿ ಅವರ ಭೇಟಿಯಾಯಿತು. ಮಾಂಟೊ ಬುದ್ಧಿವಂತಿಕೆ ಮತ್ತು ಅವರೊಳಗಿನ ಚಿಂತೆಯನ್ನು ಗ್ರಹಿಸಿದ ಬಾರಿ, ಆಸ್ಕರ್ ವೈಲ್ಡ್ ಮತ್ತು ವಿಕ್ಟರ್ ಹ್ಯೂಗೋ ಕೃತಿಗಳನ್ನು ಓದಲು ಹೇಳಿದರು. ಅವರು ಹೇಳಿದಂತೆ ವಿಕ್ಟರ್ ಹ್ಯೂಗೋನ 'ದಿ ಲಾಸ್ಟ್ ಡೇಸ್ ಆಫ್ ಎ ಕಂಡೆಮ್ನ್ಡ್' ಪುಸ್ತಕವನ್ನು 'ಸರ್ಗುಜಿಷ್ಟ್-ಎ-ಆಸಿರ್' ಎಂಬ ಹೆಸರಿನಲ್ಲಿ ಹತ್ತು ಹದಿನೈದು ದಿನಗಳಲ್ಲಿಯೇ ಅನುವಾದಿಸಿದರು. ಬಾರಿ ಅವರಿಗೆ ಅದು ತುಂಬಾ ಇಷ್ಟವಾಯಿತು. ಮಾಂಟೊ ಲೇಖಕ ಎಂದಾದದ್ದು ಆ ಮೂಲಕ. ಬಳಿಕ ಬಾರಿ ಅವರು 'ಮಸಾವತ್' ಬಿಟ್ಟು 'ಖಲ್ಕ್' ಪತ್ರಿಕೆ ಸೇರಿದಾಗ, ಅದರ ಮೊದಲ ಸಂಚಿಕೆಯಲ್ಲಿ ಮಾಂಟೊ ಮೊದಲ ಕಥೆ ತಮಾಶಾ ಪ್ರಕಟವಾಯಿತು. ಅದು ಅಮೃತಸರದ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಆಧರಿಸಿದ ಕಥೆ.
ಮಾಂಟೊ 1935ರಲ್ಲಿ ಬಾಂಬೆಗೆ ಹೋದರು. ಕಾದಂಬರಿಕಾರರಾಗಿ ಸಾಹಿತ್ಯ ವಲಯದಲ್ಲಿ ಪರಿಚಿತರಾದರು. ಸುಮಾರು 20 ವರ್ಷಗಳ ಸಾಹಿತ್ಯಿಕ ಬದುಕಿನಲ್ಲಿ ಮಾಂಟೊ ಹಲವಾರು ಕಾದಂಬರಿಗಳು, ನಾಟಕಗಳು, ಅನೇಕ ಚಲನಚಿತ್ರ ಕಥೆಗಳು ಮತ್ತು ಸಂಭಾಷಣೆಗಳನ್ನು ಮತ್ತು ಪ್ರಸಿದ್ಧರ, ಅನಾಮಧೇಯರ ರೇಖಾಚಿತ್ರಗಳನ್ನು ಬರೆದಿದ್ದಾರೆ. ಅವರ ಕಾದಂಬರಿಗಳು ಸಾಹಿತ್ಯ ಲೋಕದಲ್ಲಿ ಸಂಚಲನ ಮೂಡಿಸಿದವು. ವಿವಾದಗಳಿಗೂ ಒಳಗಾದರು. ಹಲವಾರು ಬಾರಿ ವಿಚಾರಣೆಗೆ ಒಳಪಡಿಸಲಾಯಿತು. ಪಾಕಿಸ್ತಾನದಲ್ಲಿ 3 ತಿಂಗಳ ಜೈಲು ಶಿಕ್ಷೆ ಮತ್ತು 300 ರೂ. ದಂಡ ವಿಧಿಸಲಾಯಿತು. ನಂತರ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ 'ನಿಶಾನ್-ಎ-ಇಮ್ತಿಯಾಝ್' ನೀಡಲಾಯಿತು. ಕಾಲ್ಪನಿಕ ಪಾತ್ರಗಳ ಬದಲಿಗೆ, ಮಾನಸಿಕ ಮತ್ತು ಭಾವನಾತ್ಮಕ ನೆಲೆಯಲ್ಲಿ ಜೀವನವನ್ನು ಚಿತ್ರಿಸುವ ಮೂಲಕ ಸಮಾಜದ ಕೊಳಕು ಮುಖವನ್ನು ತೆರೆದಿಟ್ಟಿದ್ದಾಗಿ ಮಾಂಟೊ ಅವರೇ ಹೇಳಿಕೊಂಡಿದ್ದಿದೆ. ಹೀಗೆ ಅವರು ತಮ್ಮ ಬೆರಳುಗಳಿಂದ ಮುಟ್ಟಿದ್ದು ಬದುಕಿನ ಜ್ವಾಲೆಗಳನ್ನೇ.
1948ರಲ್ಲಿ ವಿಭಜನೆಯ ನಂತರ ಮಾಂಟೊ ಲಾಹೋರ್‌ಗೆ ತೆರಳಿದರು. ಮುಂಬೈಯ ಮೇಲಿನ ಪ್ರೀತಿ ಮತ್ತು ಅಲ್ಲಿಯೇ ಉಳಿಯುವ ಆಸೆಯ ಹೊರತಾಗಿಯೂ ಮಾಂಟೊ ಪಾಕಿಸ್ತಾನದ ಲಾಹೋರ್‌ಗೆ ಹೋಗಬೇಕಾಯಿತು. ''ನನ್ನ ಹೆಸರು ಸಾದತ್ ಹಸನ್ ಮಾಂಟೊ. ನಾನು ಭಾರತದಲ್ಲಿ ಜನಿಸಿದೆ. ನನ್ನ ತಾಯಿಯನ್ನು ಅಲ್ಲಿ ಸಮಾಧಿ ಮಾಡಲಾಗಿದೆ. ನನ್ನ ತಂದೆಯನ್ನು ಅಲ್ಲಿಯೇ ಸಮಾಧಿ ಮಾಡಲಾಗಿದೆ. ನನ್ನ ಚೊಚ್ಚಲ ಮಗು ಕೂಡ ಆ ಭೂಮಿಯಲ್ಲಿ ವಿಶ್ರಮಿಸುತ್ತಿದೆ. ಆದರೂ ಆ ಸ್ಥಳ ಇನ್ನು ಮುಂದೆ ನನ್ನ ದೇಶವಲ್ಲ. ನನ್ನ ದೇಶ ಈಗ ಪಾಕಿಸ್ತಾನವಾಗಿದ್ದು, ಇದನ್ನು ನಾನು ಮೊದಲು ಐದು ಅಥವಾ ಆರು ಬಾರಿ ಬ್ರಿಟಿಷ್ ಪ್ರಜೆಯಾಗಿ ನೋಡಿದ್ದೇನೆ'' ಎಂದು ಮಾಂಟೊ ತಮ್ಮ ಅಂಕಲ್ ಸ್ಯಾಮ್‌ಗೆ ಬರೆದ ಪತ್ರವೊಂದರಲ್ಲಿ ತಿಳಿಸಿದ್ದಾರೆ.
ಅವರ ಆರಂಭಿಕ ಕೃತಿಗಳಲ್ಲಿ ಒಂದಾದ 'ಎ ಟೇಲ್ ಆಫ್ 1947', ವಿಭಜನೆಯ ಕಠೋರ ವಾಸ್ತವತೆಯ ಕುರಿತದ್ದಾಗಿದೆ. ''ಬಂದೂಕುಗಳಿಂದ ಧರ್ಮವನ್ನು ಭೇಟೆಯಾಡಬಹುದು ಎಂದು ಭಾವಿಸುವವರು ಮೂರ್ಖರು. ಧರ್ಮ, ನಂಬಿಕೆ, ಭಕ್ತಿ ಇವು ಆತ್ಮಕ್ಕೆ ಸಂಬಂಧಿಸಿದ್ದೇ ಹೊರತು ದೇಹಕ್ಕಲ್ಲ. ಚಾಕುಗಳು, ಕಠಾರಿಗಳು ಮತ್ತು ಗುಂಡುಗಳು ಧರ್ಮವನ್ನು ನಾಶಮಾಡಲು ಸಾಧ್ಯವಿಲ್ಲ'' ಎಂದು ಅವರು ಬರೆದಿದ್ದಾರೆ.
ಮಾಂಟೊ ಭಾರತ ವಿಭಜನೆಯನ್ನು ಬಲವಾಗಿ ವಿರೋಧಿಸಿದ್ದರು. ಅದನ್ನು ಅವರು ದೊಡ್ಡ ದುರಂತ ಮತ್ತು ಹುಚ್ಚುತನದಂಥ ವಿವೇಕಹೀನತೆ ಎಂದರು. ಅವರ ಮೊದಮೊದಲ ಕೃತಿಗಳು ಅವರ ಕಾಲದ ಪ್ರಗತಿಪರ ಬರಹಗಾರರಿಂದ ಪ್ರಭಾವಿತವಾಗಿದ್ದು, ಎಡಪಂಥೀಯ ಮತ್ತು ಸಮಾಜವಾದಿ ನಿಲುವು ತೋರಿದ್ದವು. ಅವರ ನಂತರದ ಕೃತಿಗಳು ಮನಸ್ಸಿನ ಕತ್ತಲೆಯನ್ನು ಚಿತ್ರಿಸುವತ್ತ ಗಮನ ಹರಿಸಿದವು. ವಿಭಜನೆಯ ಸುತ್ತ ಮಾನವೀಯ ಮೌಲ್ಯಗಳು ಕುಸಿದಿದ್ದರ ಬಿಂಬಗಳು ಅಲ್ಲಿದ್ದವು.
(ಆಧಾರ: theprint.in, rekhta.org)







