ಚಾರ್ಮಾಡಿಯಲ್ಲಿ ತಡರಾತ್ರಿ ಗುಂಪು ಚದುರಿಸಲು ಲಾಠಿ ಬೀಸಿದ ಪೊಲೀಸರು
ಕಾಂಗ್ರೆಸ್ ಕಾರ್ಯಕರ್ತರ ಅನುಮಾನಕ್ಕೆ ಕಾರಣವಾದ ಮತಗಟ್ಟೆ ಅಧಿಕಾರಿಗಳ ಗೊಂದಲ

ಬೆಳ್ತಂಗಡಿ, ಮೇ 11: ಚಾರ್ಮಾಡಿಯಲ್ಲಿ ಮತಗಟ್ಟೆ ಅಧಿಕಾರಿಗಳಿಂದ ಉಂಟಾದ ಗೊಂದಲಗಳಿಂದಾಗಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿದ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.
ಚಾರ್ಮಾಡಿಯ ಒಂದು ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಒಂದಿಷ್ಟು ವಿಳಂಬವಾಗಿತ್ತು. ರಾತ್ರಿ 7:20ರವರೆಗೂ ಇಲ್ಲಿ ಮತದಾನ ನಡೆದಿತ್ತು. ಆದರೆ ರಾತ್ರಿ 10:30 ದಾಟಿದರೂ ಮತಗಟ್ಟೆಯ ಅಧಿಕಾರಿಗಳು ಅಲ್ಲಿಂದ ತೆರಳಿರಲಿಲ್ಲ. ಇದರಿಂದ ಅನುಮಾನಗೊಂಡ ಕಾಂಗ್ರೆಸ್ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಮತಗಟ್ಟೆ ಎದುರು ಜಮಾಯಿಸಿದರು.
ಒಂದು ಬೂತ್ ನಲ್ಲಿ ಮತದಾನ ವಿಳಂಬವಾಗಿದ್ದರೂ ಚಾರ್ಮಾಡಿ ಪಂಚಾಯತ್ ವ್ಯಾಪ್ತಿಯ ಯಾವುದೇ ಬೂತ್ ಗಳಿಂದಲೂ ಮತಯಂತ್ರಗಳನ್ನು ಕೊಂಡೊಯ್ಯದೆ ಇದ್ದುದು ಕಾರ್ಯಕರ್ತರ ಅನುಮಾನ ಇನ್ನಷ್ಟು ಜಾಸ್ತಿಯಾಗಲು ಕಾರಣವಾಯಿತು. ಈ ನಡುವೆ ಉಂಟಾದ ವಿದ್ಯುತ್ ವ್ಯತ್ಯಯದಿಂದಾಗಿ ಎಲ್ಲೆಡೆ ಕತ್ತಲು ಆವರಿಸಿತ್ತು. ಇವೆಲ್ಲ ಕಾರಣ ಏನೋ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು, ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡದೆ ಅಲ್ಲಿಂದ ತೆರಳಲು ಬಿಡುವುದಿಲ್ಲ ಎಂದು ವಾಹನಗಳನ್ನು ಅಡ್ಡಗಟ್ಟಿದ್ದಾರೆ.
ಈ ನಡುವೆ ಮಾಹಿತಿ ತಿಳಿದ ಬಿಜೆಪಿ ಕಾರ್ಯಕರ್ತರು ಕೂಡಾ ಜಮಾಯಿಸಿದ್ದರಿಂದ ಚಾರ್ಮಾಡಿ ಪೇಟೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಸ್ಥಳಕ್ಕೆ ವಿಶೇಷ ಪೊಲೀಸ್ ತಂಡ ಆಗಮಿಸಿದ್ದು, ಜಮಾಯಿಸಿದ್ದ ಕಾರ್ಯಕರ್ತರನ್ನು ಲಾಠಿ ಬೀಸಿ ಚದುರಿಸಿದರು.
ಸ್ಥಳಕ್ಕೆ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಹಾಗೂ ಇತರ ಮುಖಂಡರು ಆಗಮಿಸಿದ್ದು, ಬಳಿಕ ಪೊಲೀಸರು ಮತಗಟ್ಟೆ ಅಧಿಕಾರಿಗಳನ್ನು ಹಾಗೂ ಮತ ಯಂತ್ರಗಳನ್ನು ಬಸ್ಸಿನಲ್ಲಿ ಉಜಿರೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು.
ಮತಗಟ್ಟೆಯಲ್ಲಿದ್ದ ಅಧಿಕಾರಿಗಳಿಗೆ ಮತಯಂತ್ರ ಪ್ಯಾಕ್ ಮಾಡುವ ಬಗ್ಗೆ ಇದ್ದ ಗೊಂದಲದಿಂದಾಗಿ ತಡವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.