ಕುತೂಹಲ ಮೂಡಿಸಿರುವ ಟರ್ಕಿಯ ಚುನಾವಣೆ

ಸರಕಾರ ಬದಲಾದರೆ ಟರ್ಕಿಗೆ ಸಾಲುವುದಿಲ್ಲ. ರಾಜಕೀಯ ಆರ್ಥಿಕತೆಯಲ್ಲಿ ಹಾಗೂ ರಾಜಕೀಯದಲ್ಲಿ ಮೂಲಭೂತ ಬದಲಾವಣೆಯಾಗಬೇಕು. ಅಲ್ಲಿನ ಅತ್ಯಂತ ಪ್ರಬಲವಾದ ಕಟ್ಟಡ ನಿರ್ಮಾಣ ಲಾಬಿಯನ್ನು ನಿಯಂತ್ರಿಸುವುದು ತುರ್ತಾಗಿ ಆಗಬೇಕು. ದೇಶದ ಜನರ ಹಿತಾಸಕ್ತಿಯ ದೃಷ್ಟಿಯಿಂದ ಮಾತ್ರವಲ್ಲ, ವಿಪತ್ತಿನಲ್ಲಿರುವ ಪ್ರಜಾಸತ್ತೆಯನ್ನು ಉಳಿಸುವ ದೃಷ್ಟಿಯಿಂದಲೂ ಇದು ಅನಿವಾರ್ಯ.
ಟರ್ಕಿಯಲ್ಲಿ ಫೆಬ್ರವರಿಯಲ್ಲಿ ಆದ ಭೂಕಂಪದಲ್ಲಿ 50,000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಅನ್ನೋದು ಅಂದಾಜು. ಲಕ್ಷಾಂತರ ಜನ ಊರು ಬಿಟ್ಟು ಹೋಗಿದ್ದಾರೆ. ಉದಾಹರಣೆಗೆ ಹಾತಾಯ್ ಪ್ರಾಂತದ ಜನಸಂಖ್ಯೆ ಸುಮಾರು 1 ಮಿಲಿಯನ್. ಭೂಕಂಪದಿಂದ ಸುಮಾರು 1,00,000 ಕಟ್ಟಡಗಳು ಕುಸಿದಿವೆ. ಇರಲು ಜಾಗವಿಲ್ಲದೆ ಸುಮಾರು 4,75,000 ಜನ ಊರು ಬಿಟ್ಟು ಹೋಗಿದ್ದಾರೆ. ಮನೆ ಕಟ್ಟಿಕೊಡುತ್ತೇವೆ ಅನ್ನುವ ಅಧ್ಯಕ್ಷರ ಭರವಸೆ ಇನ್ನೂ ಭರವಸೆಯೇ ಆಗಿದೆ. ಮೇ 14ರಂದು ಚುನಾವಣೆ ಇದೆ. ಮನೆಮಠ ಕಳೆದುಕೊಂಡವರು ಕೇವಲ ಮತಹಾಕಲು ಮತ್ತೆ ಬರುತ್ತಾರಾ? ಬರಬೇಕಾ? ಅವರಿಗೆ ತಮ್ಮ ನಾಯಕರುಗಳ ಬಗ್ಗೆ ವಿಶ್ವಾಸವಿಲ್ಲದೇ ಹೋದರೆ ಅದರಲ್ಲಿ ಏನೂ ಆಶ್ಚರ್ಯವಿಲ್ಲ.
ನಿಜ ಇದೊಂದು ನೈಸರ್ಗಿಕ ಅನಾಹುತ. ಪಾಪ ಅಧ್ಯಕ್ಷನದೇನು ತಪ್ಪು? ಅವನೇನು ಮಾಡುತ್ತಾನೆ? ಎಲ್ಲಾ ದೈವಲೀಲೆ. ಮೇಲು ನೋಟಕ್ಕೆ ಇದು ನಿಜ ಅನಿಸುತ್ತದೆ. ಹಲವರು ಇದನ್ನೇ ಹೇಳುತ್ತಿದ್ದಾರೆ. ಆದರೆ ಬಿದ್ದ ಕಟ್ಟಡಗಳು ಬೇರೆಯೇ ಕಥೆ ಹೇಳುತ್ತವೆ. ಕಳಪೆ ನಿರ್ಮಾಣ ಎಂದು ಎಲ್ಲರೂ ಹೇಳುತ್ತಿದ್ದಾರೆ. ನೀವು ಟರ್ಕಿಯ ಒಟ್ಟಾರೆ ಆರ್ಥಿಕತೆಯನ್ನು ಗಮನಿಸಿದರೆ ಒಟ್ಟಾರೆ ಹೂಡಿಕೆಯಲ್ಲಿ ಶೇ. 40ಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಉದ್ದಿಮೆಯವರಿಂದ ಆಗುತ್ತಿದೆ. ಇನ್ನು ಅವರ ರಾಜಕೀಯ ಪ್ರಭಾವ ಇದರ ಹಲವು ಪಟ್ಟು ಇದೆ. ಅವು ಎಲ್ಲಾ ರಾಜಕೀಯ ಪಕ್ಷಗಳಿಗೂ ಹಣ ನೀಡುತ್ತವೆ. ಎಲ್ಲಾ ಮುನಿಸಿಪಲ್ ಸರಕಾರಗಳ ಜೊತೆಗೂ ಅವರಿಗೆ ನಿಕಟ ಸಂಪರ್ಕ ಇದೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು ಕಮ್ಮಿ ಇಲ್ಲವೇ ಇಲ್ಲ.
ನಿಜ, ಟರ್ಕಿಯಲ್ಲಿ ಭೂಕಂಪ ಹೊಸದೇನೂ ಅಲ್ಲ. 1999ರಲ್ಲಿ ಟರ್ಕಿಯಲ್ಲಿ ಭೂಕಂಪ ಆಗಿತ್ತು. ಆಗ ಸುಮಾರು 18,000 ಜನ ಮೃತಪಟ್ಟಿದ್ದರು. ಆಗ ದೈವಲೀಲೆ ಅನ್ನಲಿಲ್ಲ. ಸರಕಾರವನ್ನು ದೂಷಿಸಲಾಗಿತ್ತು. ಕಳಪೆ ನಿರ್ಮಾಣ ಹಾಗೂ ನಗರದ ಯೋಜನೆಯನ್ನು ಕಾರಣ ಎನ್ನಲಾಗಿತ್ತು. ಮುಂದೆ ಈ ರೀತಿಯ ಘಟನೆಗಳು ಸಂಭವಿಸಿದಂತೆ ಹೊಸ ನಿಯಮಗಳನ್ನು, ನಿಯಂತ್ರಣಗಳನ್ನು ಜಾರಿಗೆ ತರಲಾಗಿತ್ತು. ಈ ಕಟ್ಟಡ ನಿರ್ಮಾಣ ಉದ್ದಿಮೆಗಳ ಲಾಬಿ ಬಲವಾದಂತೆ ಈ ನಿಯಮಗಳು ಸಡಿಲವಾಗುತ್ತಾ ಬಂದವು. ಕೊನೆಗೆ ಕಳಪೆ ಕಟ್ಟಡಗಳ ನಿರ್ಮಾಣಕ್ಕೆ ಕ್ಷಮಾದಾನವನ್ನೂ ನೀಡಲಾಯಿತು.
ಕಳಪೆ ಕಟ್ಟಡಗಳನ್ನು ಅವರು ಕೆಡವಿ ಹೊಸ ಕಟ್ಟಡವನ್ನು ಕಟ್ಟಿಕೊಡಬೇಕಾದ ನಿರ್ಬಂಧವೂ ತೆರವಾಯಿತು. ಹೆಚ್ಚುವರಿ ತೆರಿಗೆ ಕೊಟ್ಟರಾಯಿತು. ಅದು ಎಲ್ಲೇ ಕಟ್ಟಿರಲಿ, ಹೇಗೇ ಕಟ್ಟಿರಲಿ ಅವರಿಗೆ ಕ್ಷಮಾದಾನ ನೀಡಲಾಗುತ್ತದೆ. ಇಂದು ಬಹುತೇಕ ಕುಸಿದಿರುವುದು ಹಾಗೆ ಕಟ್ಟಿದ ಕಟ್ಟಡಗಳೇ ಎಂದು ಹಲವು ವರದಿಗಳು ಹೇಳುತ್ತಿವೆ. ಕಳೆದ ಎರಡು ದಶಕಗಳಲ್ಲಿ ಭ್ರಷ್ಟಾಚಾರ ಅನ್ನುವುದು ಟರ್ಕಿ ನಿರ್ಮಾಣ ಲಾಬಿಯ ಒಂದು ಮುಖ ಅಷ್ಟೆ.
ಬಹುತೇಕ ದೇಶಗಳಲ್ಲಿ ನಡೆಯುತ್ತಿರುವಂತೆ ದೊಡ್ಡ ಬಂಡವಾಳಿಗರನ್ನು ಪೋಷಿಸುವ ಒಬ್ಬ ಸರ್ವಾಧಿಕಾರಿ ನಾಯಕ ಇರುತ್ತಾನೆ. ಟರ್ಕಿಯಲ್ಲಿ ಎರಡು ದಶಕಗಳಿಂದ ರಿಸೆಪ್ ತಯ್ಯಿಪ್ ಎರ್ದೊಗಾನ್ ಆಳ್ವಿಕೆ ನಡೆಸುತ್ತಿದ್ದಾನೆ. ಇವನು ಚುನಾವಣೆಯಲ್ಲಿ ಗೆದ್ದು ಬಂದವನೆ. ಆದರೆ ಕ್ರಮೇಣ ನಿರಂಕುಶ ನಾಯಕನಾಗಿದ್ದಾನೆ. ಇಂತಹ ಪ್ರಬಲ ನಾಯಕರು ಇಂದು ಹಲವು ದೇಶಗಳಲ್ಲಿ ಕಾಣುತ್ತಾರೆ. ಇವರ ಸುತ್ತಲೇ ದೇಶದ ರಾಜಕೀಯವೂ ಸುತ್ತುತ್ತಿರುತ್ತದೆ. ಸಮಾಜದಲ್ಲಿನ ಧ್ರುವೀಕರಣ ಇವರು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಪ್ರಬಲ ಕಾರಣ ಅನ್ನುವುದನ್ನು ಹಲವು ಅಧ್ಯಯನಗಳು ಹೇಳುತ್ತಿವೆ.
ಇವರಿಗೆ ರಾಜಕೀಯ ಧ್ರುವೀಕರಣವನ್ನು ತಮ್ಮ ಅನುಕೂಲಕ್ಕೆ ಚೆನ್ನಾಗಿ ಬಳಸಿಕೊಳ್ಳಲು ಬರುತ್ತದೆ. ಮಿಲನ್ ಸ್ವೊಲಿಕ್ ಅಂತಹ ವಿದ್ವಾಂಸರು ಹೇಳುವ ಪ್ರಕಾರ, ಸಮಾಜದಲ್ಲಿ ಧ್ರುವೀಕರಣವಿದ್ದಾಗ ಜನ ತಮ್ಮ ಸ್ವಂತ ಹಿತಾಸಕ್ತಿಯ ದೃಷ್ಟಿಗಾಗಿ ಪ್ರಜಾಸತ್ತೆಯನ್ನೇ ಬಲಿಕೊಡಲು ತಯಾರಿರುತ್ತಾರೆ. ತಮ್ಮ ನಾಯಕರು ಸರ್ವಾಧಿಕಾರಿಗಳು ಎಂದು ತಿಳಿದಿದ್ದರೂ ಅವರಿಗೆ ಮತ ಚಲಾಯಿಸುತ್ತಾರೆ. ಧ್ರುವೀಕೃತ ಸಮಾಜ ಪ್ರಜಾಸತ್ತೆಗೆ ಮಾರಕ ಎಂದೇ ಅವರು ವಾದಿಸುತ್ತಾರೆ. ನಾವು ವರ್ಸಸ್ ಅವರು ಅನ್ನುವುದು ಆಯ್ಕೆಯ ವಿಷಯವಾದಾಗ ಪ್ರಜಾಸತ್ತೆ ಮೂಲೆಗುಂಪಾಗುತ್ತದೆ. ವಿರೋಧ ಪಕ್ಷದವರು ನಮ್ಮ ವಿರೋಧಿಗಳ ಪ್ರತಿನಿಧಿಗಳಾಗಿಬಿಡುತ್ತಾರೆ. ಅವರು ಪ್ರಜಾಸತ್ತೆಯ ದೃಷ್ಟಿಯಿಂದ ಸೂಕ್ತರೇ ಅಥವಾ ಅಲ್ಲವೇ ಅನ್ನುವ ಪ್ರಶ್ನೆಯೇ ಬರುವುದಿಲ್ಲ.
ಇಂದು ಟರ್ಕಿಯಲ್ಲಿ ವಿರೋಧಪಕ್ಷಗಳು ಎರ್ದೊಗಾನ್ ವಿರುದ್ಧ ಒಟ್ಟಾಗಿ ನಿಂತಿವೆ. ಆದರೆ ಜನರಿಗೆ ಅನುಮಾನ ಇದ್ದೇ ಇರುತ್ತದೆ. ಈಗ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ತಮ್ಮ ಸಾಮಾನ್ಯ ಶತ್ರುವನ್ನು ಸೋಲಿಸಲು ಬದಿಗಿಟ್ಟಿರಬಹುದು. ನಂತರ ಅವರಲ್ಲಿ ಬಿರುಕು ಕಾಣಬಹುದು ಅನ್ನುವ ಅನುಮಾನ ಇದ್ದೇ ಇರುತ್ತದೆ. ಕೇವಲ ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬರಲಾಗುವುದಿಲ್ಲ. ಅದೂ ಒಂದು ವಿಷಯವಾಗಬಹುದು ಅಷ್ಟೆ. ಭೂಕಂಪ ಕೂಡ ಒಟ್ಟಾಗಿ ಬರುವುದಕ್ಕೆ ಒಂದು ಅಸ್ತ್ರವಾಗಬಹುದು. ಆದರೆ ಜನರ ಮುಂದೆ ವಿಶ್ವಾಸ ಮೂಡಿಸುವ ಒಂದು ಭವಿಷ್ಯವನ್ನು ರೂಪಿಸಿ ತೋರಿಸಬೇಕು.
ಅದು ನಿಜಕ್ಕೂ ಸವಾಲಿನ ವಿಷಯ. ಯಾಕೆಂದರೆ ಸರಕಾರ ಬದಲಾದರೆ ಟರ್ಕಿಗೆ ಸಾಲುವುದಿಲ್ಲ. ರಾಜಕೀಯ ಆರ್ಥಿಕತೆಯಲ್ಲಿ ಹಾಗೂ ರಾಜಕೀಯದಲ್ಲಿ ಮೂಲಭೂತ ಬದಲಾವಣೆಯಾಗಬೇಕು. ಅಲ್ಲಿನ ಅತ್ಯಂತ ಪ್ರಬಲವಾದ ಕಟ್ಟಡ ನಿರ್ಮಾಣ ಲಾಬಿಯನ್ನು ನಿಯಂತ್ರಿಸುವುದು ತುರ್ತಾಗಿ ಆಗಬೇಕು. ದೇಶದ ಜನರ ಹಿತಾಸಕ್ತಿಯ ದೃಷ್ಟಿಯಿಂದ ಮಾತ್ರವಲ್ಲ, ವಿಪತ್ತಿನಲ್ಲಿರುವ ಪ್ರಜಾಸತ್ತೆಯನ್ನು ಉಳಿಸುವ ದೃಷ್ಟಿಯಿಂದಲೂ ಇದು ಅನಿವಾರ್ಯ.
ಇಂದು ಎಲ್ಲಾ ರಾಷ್ಟ್ರೀಯ ಮಾಧ್ಯಮಗಳು ಅಧ್ಯಕ್ಷ ಎರ್ದೊಗಾನ್ ಕೈಯಲ್ಲಿದೆ. ಸರಕಾರವನ್ನು ವಿರೋಧಿಸುವುದಕ್ಕೆ ಮಾಧ್ಯಮಗಳಿಗೆ ಸಾಧ್ಯವಾಗುತ್ತಿಲ್ಲ. ಹಲವು ಪತ್ರಕರ್ತರು ಜೈಲಿನಲ್ಲಿದ್ದಾರೆ. ಪತ್ರಿಕಾ ಸ್ವಾತಂತ್ರ್ಯ ಪ್ರಜಾಸತ್ತೆಯ ಉಳಿವಿನ ದೃಷ್ಟಿಯಿಂದ ಮಾತ್ರವಲ್ಲ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ದೃಷ್ಟಿಯಿಂದಲೂ ಬೇಕು. ಇಂದು ಮಾಧ್ಯಮಗಳು ನರಳಿರುವುದರಿಂದ ಭೂಕಂಪದಲ್ಲಿ ನೊಂದವರಿಗೆ ಪರಿಹಾರ ಕೊಡುವುದೂ ಕಷ್ಟವಾಗುತ್ತಿದೆ. ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದಲೂ ಪ್ರಜಾಸತ್ತೆ ಅನಿವಾರ್ಯ ಅನ್ನುವುದನ್ನು ಅಮರ್ತ್ಯಸೇನ್ ಅಂತಹವರ ಅಧ್ಯಯನಗಳು ಸ್ಪಷ್ಟವಾಗಿ ಸಾಬೀತು ಪಡಿಸಿವೆ.
ಇಂತಹ ಮಾಧ್ಯಮಗಳ ನಿಯಂತ್ರಣವಿರುವುದರಿಂದ ವಿರೋಧ ಪಕ್ಷಗಳಿಗೆ ಹಾಗೂ ರಾಜಕಾರಣಿಗಳಿಗೆ ತಮ್ಮ ಸಂದೇಶವನ್ನು ಮತದಾರರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ವಿಶೇಷವಾಗಿ ಭ್ರಷ್ಟಾಚಾರ ಹಾಗೂ ಸರಕಾರದ ವಿಫಲತೆಯನ್ನು ಕುರಿತಂತೆ ಅರಿವು ಮೂಡಿಸಲು ಸಾಧ್ಯವಾಗುತ್ತಿಲ್ಲ.
ಎರ್ದೊಗಾನ್ ಅಂತಹವರಿಗೆ ಅಲ್ಲಿನ ಬಂಡವಾಳಿಗರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಜನರ ಸಮಸ್ಯೆಗಳನ್ನು ಪರಿಹರಿಸುವುದು ಅವರಿಗೆ ಸಾಧ್ಯವಿಲ್ಲ. ಜನರಲ್ಲಿ ಹತಾಶೆ ಸ್ವಾಭಾವಿಕವಾಗಿಯೇ ಹೆಚ್ಚುತ್ತಿದೆ. ಪರ್ಯಾಯ ವ್ಯವಸ್ಥೆ ಸಾಧ್ಯವಾದರೆ ಜನತೆಗೆ ಒಳಿತು. ಪ್ರಜಾಸತ್ತೆಗೂ ಒಳಿತು. ಹಾಗಾಗಿಯೇ ಇಂದು ಜಗತ್ತು ಟರ್ಕಿಯ ಚುನಾವಣೆಯನ್ನು ಕುತೂಹಲದಿಂದ ನೋಡುತ್ತಿದೆ. ಯಾಕೆಂದರೆ ಇಂದು ಟರ್ಕಿಯ ಸ್ಥಿತಿಯಲ್ಲೇ ಹಲವು ದೇಶಗಳಿವೆ. ಪ್ರಜಾಸತ್ತೆಯ ಉಳಿವನ್ನು ಆಶಿಸುತ್ತಿರುವ ಹಲವು ಜೀವಿಗಳು ಆಸೆಗಣ್ಣಿನಿಂದ ಟಿರ್ಕಿಯನ್ನು ನೋಡುತ್ತಿವೆ.







