ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ, ಇಮ್ರಾನ್ ಖಾನ್ ಆಪ್ತ ಶಾ ಮಹಮೂದ್ ಖುರೇಷಿ ಬಂಧನ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ, ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತ ಸಹಾಯಕ ಶಾ ಮಹಮೂದ್ ಖುರೇಷಿ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಇಮ್ರಾನ್ ಖಾನ್ ಬಂಧನದ ನಂತರ ಹದಗೆಡುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಹಾಗೂ ದೇಶದ ರಾಜಧಾನಿ ಹಾಗೂ ಮೂರು ಪ್ರಾಂತ್ಯಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ.
ಖುರೇಷಿಯವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷವು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಸಾದಾ ಬಟ್ಟೆ ಧರಿಸಿದ ವ್ಯಕ್ತಿಗಳು ಖುರೇಷಿ ಅವರನ್ನು ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಖುರೇಷಿ ಅವರು ಬಂಧಿಸಲ್ಪಟ್ಟ ಸ್ಥಳದಿಂದ ಹೊರಡುವ ಮೊದಲು ಪಕ್ಷದ ಕಾರ್ಯಕರ್ತರತ್ತ ಕೈ ಬೀಸಿದ್ದಾರೆ.
66 ವರ್ಷದ ಶಾ ಮಹಮೂದ್ ಖುರೇಷಿ ಅವರನ್ನು ಗುರುವಾರ ಮುಂಜಾನೆ ಇಸ್ಲಾಮಾಬಾದ್ ಪೊಲೀಸರು ಬಂಧಿಸಿ "ಅಜ್ಞಾತ ಸ್ಥಳಕ್ಕೆ" ಕರೆದೊಯ್ದಿದ್ದಾರೆ ಎಂದು ಪಿಟಿಐ ಹೇಳಿದೆ.
ಮಂಗಳವಾರ ಇಸ್ಲಾಮಾಬಾದ್ ಹೈಕೋರ್ಟ್‌ನ ಕೋಣೆಗೆ ನುಗ್ಗಿದ ಅರೆಸೈನಿಕ ಪಡೆಗಳು ಪಿಟಿಐ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದ ಎರಡು ದಿನಗಳ ನಂತರ ಖುರೇಷಿಯ ಬಂಧನವಾಗಿದೆ.