ವೊಡಾಫೋನ್ ಬದಲಿಗೆ ರಿಲಯನ್ಸ್ ಜಿಯೋ ಸಂಸ್ಥೆಯನ್ನು ತನ್ನ ಮೊಬೈಲ್ ಸೇವಾ ಪೂರೈಕೆದಾರನಾಗಿ ಆಯ್ಕೆ ಮಾಡಿದ ಗುಜರಾತ್

ಅಹ್ಮದಾಬಾದ್: ಗುಜರಾತ್ ಸರ್ಕಾರ ತನ್ನ ಅಧಿಕೃತ ಮೊಬೈಲ್ ಸೇವಾ ಪೂರೈಕೆದಾರನಾಗಿ ವೊಡಾಫೋನ್ ಐಡಿಯಾ ಬದಲು ಆಕಾಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಇನ್ಫೋಕಾಮ್ ಅನ್ನು ಆಯ್ದುಕೊಂಡಿದೆ. ಇದರೊಂದಿಗೆ ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ಮತ್ತು ಮುಖ್ಯಸ್ಥರ ಮೊಬೈಲ್ ಸೇವಾ ಪೂರೈಕೆದಾರನಾಗಿ ರಿಲಯನ್ಸ್ ಜಿಯೋ ಇರಲಿದೆ.
ಕಳೆದ 12 ವರ್ಷಗಳಿಂದ ಗುಜರಾತ್ ಸರ್ಕಾರ ವೊಡಾಫೋನ್ ಅನ್ನು ತನ್ನ ಮುಖ್ಯ ಮೊಬೈಲ್ ಸೇವಾ ಪೂರೈಕೆದಾರನಾಗಿ ಹೊಂದಿತ್ತು. ರಾಜ್ಯದಲ್ಲಿ ಡಿಸೆಂಬರ್ 2022 ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಹೊಸ ಮೊಬೈಲ್ ಸೇವಾ ಪೂರೈಕೆದಾರನಿಗಾಗಿ ಬಿಡ್ ಆಹ್ವಾನಿಸಲಾಗಿತ್ತು.
ರಿಲಯನ್ಸ್ ಜಿಯೋ ಜೊತೆಗಿನ ಆರಂಭಿಕ ಒಪ್ಪಂದ ಎರಡು ವರ್ಷಗಳಿಗಾಗಿ ಆಗಿದೆ. ಆರು ತಿಂಗಳ ನಂತರ ಸೇವೆಯ ಗುಣಮಟ್ಟ ಮತ್ತು ದರಗಳನ್ನು ಸರ್ಕಾರ ಪರಿಗಣಿಸಲಿದೆ ಹಾಗೂ ಅಸಮಾಧಾನಕರವೆಂದು ಕಂಡುಬಂದರೆ ಒಪ್ಪಂದವನ್ನು ಅಂತ್ಯಗೊಳಿಸಬಹುದಾಗಿದೆ.
2008ರಲ್ಲಿ ರಾಜ್ಯ ಸರ್ಕಾರ ತನ್ನ ಅಧಿಕಾರಿಗಳು ಮತ್ತು ಸಚಿವರಿಗೆ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ನೀಡಲು ಆರಂಭಿಸಿತ್ತು. ಆರಂಭದಲ್ಲಿ ಬಿಎಸ್ಸೆನ್ನೆಲ್ ಸಂಸ್ಥೆಯು ಸರ್ಕಾರದ ಮೊಬೈಲ್ ಸೇವಾ ಪೂರೈಕೆದಾರನಾಗಿತ್ತು. 2010ರಲ್ಲಿ ಬಿಎಸ್ಸೆನ್ನೆಲ್ ಬದಲು ವೊಡಾಫೋನ್ ಎಸ್ಸಾರ್ ಗುಜರಾತ್ ಲಿಮಿಟೆಡ್ ಅನ್ನು ಆಯ್ದುಕೊಳ್ಳಲಾಗಿತ್ತು.
ಈಗಿನ ಹೊಸ ಒಪ್ಪಂದದಂತೆ ರಿಲಯನ್ಸ್ ಸಂಸ್ಥೆಗೆ ಹೊಸ ಸೀರೀಸ್ ಒದಗಿಸುವಂತೆ ಕೇಳಲಾಗಿದ್ದು ಅದರನ್ವಯ ಮೊದಲ ಐದು ಅಂಕಿಗಳು ವಿಶಿಷ್ಟ ಮತ್ತು ಎಲ್ಲಾ ಬಳಕೆದಾರರಿಗೆ ಒಂದೇ ಆಗಲಿದೆ. ಕಂಪೆನಿ ಒದಗಿಸುವ ಎಲ್ಲಾ ಸಂಖ್ಯೆಗಳು ಕ್ಲೋಸ್ಡ್ ಯೂಸರ್ ಗ್ರೂಪ್ ಭಾಗವಾಗಿರಲಿದೆ.
ಮಾಸಿಕ ಬಾಡಿಗೆ ರೂ. 37.50 ಆಗಿದ್ದು ಎಲ್ಲಾ ಒಳಬರುವ ಹೊರಹೋಗುವ ಕರೆಗಳು ಉಚಿತವಾಗಿದೆ. ಡೇಟಾ ಸೇವೆಗಳಿಗೆ (4ಜಿ ಮತ್ತು 5ಜಿ) ಆಯ್ದ ಬ್ಯಾಕ್ ಅನುಸಾರವಾಗಿ ರೂ. 25 ಮತ್ತು ರೂ. 125 ದರ ವಿಧಿಸಲಾಗುವುದು.