ಕುತೂಹಲ ಸೃಷ್ಟಿಸಿದ ಸಿದ್ದರಾಮಯ್ಯ-ಸುರ್ಜೆವಾಲಾ ಸಮಾಲೋಚನೆ
ಬೆಂಗಳೂರು, ಮೇ 11: ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಲಿದೆ ಎಂಬ ಸುಳಿವು ನೀಡಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಖುದ್ದು ಭೇಟಿ ಮಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸಮಾಲೋಚನೆ ನಡೆಸಿದರು.
ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಸಿದ್ದರಾಮಯ್ಯ ಅವರು ನಿನ್ನೆ ರಾತ್ರಿಯೇ ಮೈಸೂರಿನಿಂದ ಬೆಂಗಳೂರಿಗೆ ಹಿಂದಿರುಗಿದ್ದು, ನಗರದ ಖಾಸಗಿ ಹೊಟೇಲ್‍ನಲ್ಲಿ ಮುಂದಿನ ತಂತ್ರಗಾರಿಕೆ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ಕಡೆ ‘ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರು ವಿಶ್ವಾಸದಲಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳ ಬರಲಿವೆ ಎಂಬ ಸಮೀಕ್ಷೆಗಳು ತಿಳಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ.
‘ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಅದಕ್ಕೇನು ಮಾಡುವುದು? ಜೆಡಿಎಸ್ ಜತೆ ಕೈಜೋಡಿಸುವುದೇ? ಪಕ್ಷೇತರರು ಎಷ್ಟು ಸ್ಥಾನ ಗಳಿಸಲಿದ್ದಾರೆ, ಅವರನ್ನು ಸೆಳೆಯುವುದೇ? ಪಕ್ಷ ಬಿಟ್ಟು ಹೋಗಿ ಸದ್ಯ ಬಿಜೆಪಿ ಪಾಳಯದಲ್ಲಿ ಶಾಸಕರಾಗಿರುವವರನ್ನು ವಾಪಸ್ ಸೆಳೆಯುವುದೇ?’ ಎಂಬುದು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
‘ರಾಜ್ಯದ ಜನತೆ ವಿಧಾನಸಭೆ ಚುನಾವಣೆಯಲ್ಲಿ ಬದಲಾವಣೆಗಾಗಿ ತಮ್ಮ ಮತ ಚಲಾಯಿಸಿದ್ದು, ಕಾಂಗ್ರೆಸ್ ಪಕ್ಷದ ಪರವಾಗಿ ಕರ್ನಾಟಕ ರಾಜ್ಯದ ಜನತೆ ಧನ್ಯವಾದಗಳನ್ನು ಹೇಳುತ್ತೇನೆ. 40 ಪರ್ಸೆಂಟ್ ಕಮಿಷನ್ ಸರಕಾರದ ಭ್ರಷ್ಟಾಚಾರ ವಿರುದ್ಧ ಮತ ಹಾಕಿದ್ದಾರೆ. ಮೇ 13ಕ್ಕೆ ಕಾಂಗ್ರೆಸ್ ಸರಕಾರ ರಚನೆಯಾಗಲಿದೆ. ಕರ್ನಾಟಕವನ್ನು ಮತ್ತೆ ನಾವು ರೀ ಬ್ರಾಂಡ್ ಮಾಡಲಿದ್ದೇವೆ’ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಪ್ರತಿಕ್ರಿಯೆ ನೀಡಿದರು.
‘ಕಾಂಗ್ರೆಸ್ ಪಕ್ಷ ಈ ಬಾರಿ 130ರಿಂದ 150 ಸ್ಥಾನಗಳನ್ನು ಗಳಿಸಲಿದೆ ಎಂದು ನಾವು ಅಂದಾಜು ಮಾಡಿದ್ದೆವು. ಅದೇ ರೀತಿ ಈ ಬಾರಿ ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ. ನಾವು ಜನರ ನಾಡಿಮಿಡಿತ ಸರಿಯಾಗಿ ಅರ್ಥ ಮಾಡಿಕೊಂಡಿದ್ದೇವೆ. ನಾವು ನಿರೀಕ್ಷೆ ಮಾಡಿದ ಫಲಿತಾಂಶವೇ ಬರಲಿದೆ. ನಾನು ವರುಣ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ’
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ
ಸ್ಪಷ್ಟನೆ: 'ಮತದಾನದ ಮಾಡಿದ ಬಳಿಕ ತಮ್ಮ ಬಲಗೈಗೆ ಅಳಿಸಲಾಗದ ಶಾಯಿ ಹಾಕಲಾಗಿದ್ದು, ವೈದ್ಯಕೀಯ ಕಾರಣಗಳಿಂದಾಗಿ ಎಡಗೈಗೆ ಬದಲಿಗೆ ಬಲಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಿಸಿಕೊಂಡಿದ್ದೇನೆ'
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ