ಮಂಗಳೂರು: ಕಾಂಗ್ರೆಸ್-ಬಿಜೆಪಿ ಮಧ್ಯೆ ಘರ್ಷಣೆ ಪ್ರಕರಣ; ಪೊಲೀಸರಿಂದಲೇ ಮೂರು ಪ್ರತ್ಯೇಕ ದೂರು

ಮಂಗಳೂರು, ಮೇ 11: ಮೂಡುಶೆಡ್ಡೆ ಜಂಕ್ಷನ್‌ನಲ್ಲಿ ಬುಧವಾರ ರಾತ್ರಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ನಡೆದ ಹೊಡೆದಾಟ, ಘರ್ಷಣೆಗೆ ಸಂಬಂಧಿಸಿದಂತೆ ಕಾವೂರು ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ನೀಡಿದ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ.
ಕಾವೂರು ಠಾಣೆಯ ಎಸ್ಸೈ ರೇವಣ್ಣ ಸಿದ್ದಪ್ಪ ನೀಡಿದ ದೂರಿನಲ್ಲಿ ‘ಮೇ 10ರಂದು ರಾತ್ರಿ 7:30ಕ್ಕೆ ತಾನು ಗಸ್ತು ನಿರತನಾಗಿದ್ದ ವೇಳೆ ಮೂಡುಶೆಡ್ಡೆ ಜಂಕ್ಷನ್‌ನಲ್ಲಿ ಗಲಾಟೆಯಾಗುತ್ತಿರುವ ಬಗ್ಗೆ ಹೆಡ್‌ಕಾನ್‌ಸ್ಟೇಬಲ್ ಬಾಲಕೃಷ್ಣ ತಿಳಿಸಿದ ಮೇರೆಗೆ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದೆ. ಆವಾಗ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಕಲ್ಲು ಹಾಗೂ ಸೋಡಾ ಬಾಟಲಿಗಳನ್ನು ಹಿಡಿದುಕೊಂಡು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡಾಗ ಗುಂಪು ಚದರುವಂತೆ ಸೂಚಿಸಿದೆ. ಆದರೆ ಅದನ್ನು ನಿರ್ಲಕ್ಷಿಸಿದ ಪುನೀತ್, ಹರ್ಷಿತ್, ಹರೀಶ್ ರಾಜ್, ಚೇತನ್, ಪ್ರದೀಪ್ ಮೂಡುಶೆಡ್ಡೆ, ರಾಕೇಶ್, ಪ್ರಸಾದ್ ಮಲ್ಲಿ, ಸಂಪತ್ ಶೆಟ್ಟಿ, ಪ್ರಕಾಶ ಶೆಟ್ಟಿ, ಸುಜಯ್ ಹಾಗೂ ಮತ್ತಿತರರು ತನ್ನ ಆದೇಶವನ್ನು ದಿಕ್ಕರಿಸಿದ್ದಲ್ಲದೆ ಸಮವಸ್ತ್ರದಲ್ಲಿದ್ದ ತನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಂಗಳೂರು ಸಿಎಆರ್ ಘಟಕ ಎಆರ್‌ಎಸ್ಸೈ ಭಾನುಪ್ರಕಾಶ್ ನೀಡಿದ ದೂರಿನಲ್ಲಿ ಮೇ 10ರ ರಾತ್ರಿ 8:25ಕ್ಕೆ ಮೂಡುಶೆಡ್ಡೆ ಜಂಕ್ಷನ್‌ನಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಕಲ್ಲು ಹಾಗೂ ಸೋಡಾ ಬಾಟಲಿಗಳನ್ನು ಹಿಡಿದುಕೊಂಡು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ತಳ್ಳಾಟ, ನೂಕಾಟ ನಡೆಸಿ ಮೋದಿ ಹಾಗೂ ಮಿಥುನ್ ರೈಗೆ ಜೈಕಾರ ಘೋಷಣೆಗಳನ್ನು ಕೂಗುತ್ತಾ ಗಲಾಟೆ ಮಾಡುತ್ತಿದ್ದರು. ಆವಾಗ ವಾಹನದಲ್ಲಿದ್ದ ಪ್ರಹಾರ ದಳದ ಅಧಿಕಾರಿ ಸಿಬ್ಬಂದಿಯು ವಾಹನದಿಂದ ಬಾಡಿ ಪ್ರೊಟೆಕ್ಟರ್, ಕೆನ್‌ಶೀಲ್ಡ್, ಹೆಲ್ಮೆಟ್, ಲಾಠಿಯನ್ನು ಹಿಡಿದುಕೊಂಡು ಕೆಳಗೆ ಇಳಿದಿದ್ದರು. ಇಲಾಖಾ ವಾಹನದ ಸುರಕ್ಷತೆಯ ದೃಷ್ಟಿಯಿಂದ ವಾಹನದ ಮುಂದಿನ ಗಾಜಿನ ರಕ್ಷಣೆಗಾಗಿ ವಯರ್‌ಮೆಶ್‌ನ್ನು ಅಳವಡಿಸುತ್ತಿರುವ ವೇಳೆ ಕಿಡಿಗೇಡಿಗಳು ಕಲ್ಲುಗಳನ್ನು ಬಿಸಾಡಿದ್ದಾರೆ. ಅದರಲ್ಲಿ 2 ಕಲ್ಲುಗಳು ವಯರ್‌ಮೆಶ್‌ಗೆ ಮತ್ತು ಒಂದು ಕಲ್ಲು ತನ್ನ ತಲೆಯ ಹಿಂಭಾಗಕ್ಕೆ ಬಿದ್ದ ಪರಿಣಾಮ ಗಾಯವಾಗಿದೆ. ವಾಹನದಲ್ಲೇ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವೆ ಎಂದು ತಿಳಿಸಿದ್ದಾರೆ.
ಮಂಗಳೂರು ನಗರದ ಸಿಎಆರ್ ಘಟಕದಲ್ಲಿ ಎಸ್ಸೈ ಆಗಿರುವ ವಸಂತ ಕೆ.ವಿ. ನೀಡಿದ ದೂರಿನಲ್ಲಿ ‘ನಗರ ಪೊಲೀಸ್ ಉಪಾಯುಕ್ತರ ಇಲಾಖಾ ವಾಹನದ ಚಾಲಕನಾಗಿ ತಾನು ಕರ್ತವ್ಯ ನಿರ್ವಹಿಸಿಕೊಂಡಿದ್ದು, ಮೇ 10ರಂದು ರಾತ್ರಿ 8:40ಕ್ಕೆ ಮೂಡುಶೆಡ್ಡೆ ಜಂಕ್ಷನ್ ಬಳಿ ಕಾಂಗ್ರೆಸ್-ಬಿಜೆಪಿ ಅಕ್ರಮ ಕೂಟ ಸೇರಿ ಕಲ್ಲು ಘರ್ಷಣೆಗೆ ಸಜ್ಜಾಗಿದ್ದು, ಉಪಾಯುಕ್ತರು ಎರಡೂ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸುವ ವೇಳೆ ಇಲಾಖೆಯ ವಾಹನಕ್ಕೆ ಇಂಟರ್‌ಲಾಕ್ ತುಂಡನ್ನು ಬಿಸಾಡಿ ಕಾರಿನ ಮುಂದಿನ ಗಾಜು, ಬೋನೆಟ್, ಚಾಲಕನ ಹಿಂಬದಿಯ ಬಾಗಿಲು, ಬಲ ಮತ್ತು ಎಡಬದಿಯ ಟಾಪ್ ಜಖಂಗೊಳಿಸಿದ್ದಾರೆ. ಇದರಿಂದ ಸುಮಾರು 40,000 ರೂ. ನಷ್ಟವಾಗಿದೆ ಎಂದು ತಿಳಿಸಲಾಗಿದೆ.
ಮೂರು ಪ್ರತ್ಯೇಕ ನೀಡಿದ ದೂರಿನಲ್ಲಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲು ಉಲ್ಲೇಖಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಮತ್ತು ಬಿಜೆಪಿ ಪ್ರತ್ಯೇಕ ದೂರು ನೀಡಿದ್ದಾರೆ. ಪೊಲೀಸರು ಸುಮಾರು 25ಕ್ಕೂ ಅಧಿಕ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.