ದ.ಕ. ಚುನಾವಣೆ: ಶೇಕಡಾವಾರು ಪ್ರಮಾಣದಲ್ಲಿ ಕೊಂಚ ಹೆಚ್ಚಳ

ಮಂಗಳೂರು, ಮೇ 11: ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಶೇಕಡಾವಾರು ಪ್ರಮಾಣದಲ್ಲಿ ಕೊಂಚ ಹೆಚ್ಚಳವಾಗಿದ್ದು, ಗುರುವಾರ ಜಿಲ್ಲಾಡಳಿತ ನೀಡಿದ ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ ಶೇ.77.27 ಮತದಾನವಾಗಿದೆ.
ಅರ್ಹತೆ ಪಡೆದಿದ್ದ 17,81,389 ಮತದಾರರ ಪೈಕಿ 13,76,500 ಮತದಾರರು ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ ಮನೆಯಿಂದಲೇ ಮತದಾನಗೈದರು ಹಾಗೂ ಮೇ 11ರವರೆಗಿನ ಸೇವಾ ಮತದಾನದ ಅಂಚೆ ಮತವೂ ಸೇರಿದೆ.
ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರಿಗೆ ಎಪ್ರಿಲ್ 29ರಿಂದ ಮೇ 6ರವರೆಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ಚುನಾವಣಾ ಕರ್ತವ್ಯದಲ್ಲಿರುವವರಿಗೆ ಹಾಗೂ ಮತ್ತಿತರ ಅಗತ್ಯ ಸೇವೆಗಳಲ್ಲಿರುವರಿಗೂ ಅಂಚೆ ಮತದಾನದ ಅವಕಾಶವೂ ಇತ್ತು. ಅದರಂತೆ ಜಿಲ್ಲೆಯಲ್ಲಿ ಮೇ 11ರವರೆಗೆ 18,153 ಮಂದಿ ಮತದಾನ ಮಾಡಿದ್ದರು.
ಮಂಗಳೂರು ನಗರ ದಕ್ಷಿಣದಲ್ಲಿ 2018ರಲ್ಲಿಯೇ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿತ್ತು, ಅಂದರೆ 2,40,057 ಮತದಾರರ ಪೈಕಿ 1,61,969 ಮತದಾರರು ಮತ ಚಲಾಯಿಸಿದ್ದು, ಶೇ.67.47 ಮತದಾನವಾಗಿತ್ತು. ಈ ಬಾರಿ ಅದು ಮತ್ತಷ್ಟು ಕಡಿಮೆಯಾಗಿದೆ. ಕ್ಷೇತ್ರದ 2,45,744 ಮತದಾರರ ಪೈಕಿ 1,62,004 ಮಂದಿ ಹಕ್ಕು ಚಲಾಯಿ ಸಿದ್ದು, ಶೇ. 65.92 ಮತದಾನವಾಗಿದೆ.
ಬೆಳ್ತಂಗಡಿಯಲ್ಲಿ 2,28,871 ಮತದಾರರ ಪೈಕಿ 1,89,160 ಮಂದಿ ಚಲಾಯಿಸುವ ಮೂಲಕ ಶೇ. 82.65 ಮತದಾನವಾಗಿದೆ. ಉಳಿದಂತೆ ಮೂಡುಬಿದಿರೆಯ 2,05,065 ಮತದಾರರ ಪೈಕಿ 1,58,789 ಮಂದಿ ಮತ ಚಲಾಯಿಸಿದ್ದಾರೆ. ಮಂಗಳೂರು ನಗರ ಉತ್ತರದ 2,49,421 ಮತದಾರರ ಪೈಕಿ 1,82,724 ಮಂದಿ, ಮಂಗಳೂರು ಕ್ಷೇತ್ರದ 2,05,129 ಮತದಾರರ ಪೈಕಿ 1,59,980 ಮಂದಿ, ಬಂಟ್ವಾಳದ 2,28,377 ಮತದಾರರ ಪೈಕಿ 1,85575 ಮಂದಿ, ಪುತ್ತೂರಿನ 2,12,753 ಮತದಾರರ ಪೈಕಿ 1,72,550 ಮಂದಿ, ಸುಳ್ಯದ 2,06,029 ಮತದಾರರ ಪೈಕಿ 1,65,718 ಮಂದಿ ಮತ ಚಲಾಯಿಸಿದ್ದಾರೆ.
ಮೇ 13ರಂದು ಮತ ಎಣಿಕೆ
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಮೇ 13ರಂದು ಸುರತ್ಕಲ್ ಸಮೀಪದ ಎನ್‌ಐಟಿಕೆಯಲ್ಲಿ ನಡೆಯಲಿದೆ. ಅಂದು ಮತ ಎಣಿಕೆ ಆರಂಭವಾಗುವವರೆಗೆ ಸ್ವೀಕೃತವಾಗುವ ಸೇವಾ ಮತದಾರರ ಅಂಚೆ ಮತಪತ್ರಗಳನ್ನು ಎಣಿಕೆಗೆ ಪರಿಗಣಿಸಲಾಗುತ್ತದೆ. ಹಾಗಾಗಿ ಮತದಾನದ ಶೇಕಡವಾರು ಪ್ರಮಾಣದಲ್ಲಿ ಇನ್ನೂ ಸ್ವಲ್ಪ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮತ ಎಣಿಕೆಯು ಬೆಳಗ್ಗೆ 8ಕ್ಕೆ ಆರಂಭವಾಗಲಿದೆ. ಅಂಚೆ ಮತಪತ್ರಗಳ ಎಣಿಕೆ ಪ್ರಾರಂಭವಾದ 30 ನಿಮಿಷಗಳ ಬಳಿಕ ಮತಗಟ್ಟೆಗಳಲ್ಲಿ ಇವಿಎಂನಲ್ಲಿ ದಾಖಲಾದ ಮತಗಳ ಎಣಿಕೆ ನಡೆಸಲು ಗೊತ್ತುಪಡಿಸಲಾದ ಮೇಜುಗಳಲ್ಲಿ ನಡೆಯಲಿದೆ.
ಮತಗಳ ಎಣಿಕೆ ನಡೆಸುವ ಬಗ್ಗೆ ಅಭ್ಯರ್ಥಿಗಳು ನಿಗದಿಪಡಿಸಿದ ನಮೂನೆ 18ರಲ್ಲಿ 14 ಮತ ಎಣಿಕೆ ಮೇಜಿಗೆ, 5 ಅಂಚೆ ಪತ್ರಗಳ ಎಣಿಕೆ ಮೇಜಿಗೆ ಮತ್ತು 1 ಚುನಾವಣಾಧಿಕಾರಿ ಮೇಜಿಗೆ ಹೀಗೆ ಒಟ್ಟು 20 ಮತ ಎಣಿಕೆ ಏಜೆಂಟರನ್ನು ನೇಮಕ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.