ಉಡುಪಿ: ಕೀಳಂಜೆ ಪರಿಸರದಲ್ಲಿ ಚಿರತೆ ಹಾವಳಿ

ಉಡುಪಿ, ಮೇ 11: ಹಾವಂಜೆ ಗ್ರಾಮದ ಕೀಳಂಜೆ ಪರಿಸರದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಮನೆಗಳಲ್ಲಿನ ಸಾಕು ನಾಯಿಗಳನ್ನು ಚಿರತೆ ಹೊತ್ತೊಯ್ದಿರುವ ಬಗ್ಗೆ ವರದಿಯಾಗಿದೆ.
ಸ್ಥಳೀಯರಾದ ಗಣಪತಿ ನಾಯಕ್ ಹಾಗೂ ಜಯಶೆಟ್ಟಿ ಬನ್ನಂಜೆ ಎಂಬವರ ಮನೆಯಲ್ಲಿ ಸಾಕಿದ ನಾಯಿಗಳನ್ನು ಚಿರತೆ ರಾತ್ರಿಯ ಹೊತ್ತಿನಲ್ಲಿ ದಾಳಿ ನಡೆಸಿ ಹೊತ್ತುಕೊಂಡು ಹೋಗಿದೆ ಎಂದು ತಿಳಿದುಬಂದಿದೆ. ಈ ಪರಿಸರ ದಲ್ಲಿ ಅರಣ್ಯ ಇಲಾಖೆಯ ಅಕೇಶಿಯ ಮರದ ತೋಪುಗಳ ರಕ್ಷಿತಾ ಅರಣ್ಯ ಮತ್ತು ತಪ್ಪಲಿನಲ್ಲಿ ಬಯಲುಗದ್ದೆ ಇದೆ. ಇಲ್ಲಿ ಚಿರತೆಗಳು ವಾಸ ಮಾಡಿಕೊಂಡಿರಬಹುದು ಎಂಬುದು ಸ್ಥಳೀಯರ ಅನಿಸಿಕೆ.
ಈ ಪ್ರದೇಶದಲ್ಲಿ ತುಂಬಾ ಮನೆಗಳಿದ್ದು, ಹಿಂದೆ ಇಲ್ಲಿ ಕಾಡುಕೋಣಗಳ ಹಾವಳಿ ಕೂಡ ಇತ್ತು. ಈಗ ಚಿರತೆಯ ಹಾವಳಿಯಿಂದ ಭಯ ಪಡುವಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಅರಣ್ಯ ಇಲಾಖೆ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರಾದ ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ ಒತ್ತಾಯಿಸಿದ್ದಾರೆ.
Next Story