ಉಡುಪಿ ಎಸ್ಸೈ ಕರ್ತವ್ಯಕ್ಕೆ ಅಡ್ಡಿ: ದೀಪಕ್ ಸಾಲಿಯಾನ್ ವಿರುದ್ಧ ಪ್ರಕರಣ ದಾಖಲು

ಮಲ್ಪೆ: ಚುನಾವಣಾ ಕರ್ತವ್ಯದಲ್ಲಿದ್ದ ಉಡುಪಿಯ ಎಸ್ಸೈ ಅವರ ಕರ್ತವ್ಯಕ್ಕೆ ಯುವಕನೋರ್ವ ಅಡ್ಡಿ ಪಡಿಸಿದ ಘಟನೆ ಮೇ 10ರಂದು ಸಂಜೆ ವೇಳೆ ತೆಂಕನಿಡಿಯೂರು ಲಕ್ಷ್ಮೀನಗರ ಎಂಬಲ್ಲಿ ನಡೆದಿದೆ.
ತೆಂಕನಿಡಿಯೂರು ಲಕ್ಷೀನಗರದ ಬೆಳ್ಕಳೆ ಶಾಲೆಯ ಮತಗಟ್ಟೆಯ ಬಳಿ ಸ್ಥಳೀಯ ದೀಪಕ್ ಸಾಲಿಯಾನ್ (32) ಎಂಬಾತ ಜನರನ್ನು ಸೇರಿಸಿಕೊಂಡು ಗುಂಪಾಗಿ ಮಾತನಾಡುತ್ತಿದ್ದು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಸ್ಸೈ ಸುಷ್ಮಾ ಭಂಡಾರಿ, ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಇಲ್ಲಿಂದ ತೆರಳುವಂತೆ ಸೂಚಿಸಿದರು.
ಈ ವೇಳೆ ದೀಪಕ್ ಸಾಲಿಯಾನ್ ಏರುಧ್ವನಿಯಲ್ಲಿ ನಾವು ಇಲ್ಲಿಂದ ಹೋಗಲ್ಲ. ನಮಗೆ ಹೇಳಲು ನೀನು ಯಾರೂ, ಏನೂ ಬೇಕಾದರೂ ಮಾಡಿಕೋ ಎಂದು ಏಕವಚನದಲ್ಲಿ ಬೈದಿದ್ದು, ಅಲ್ಲದೆ ನನ್ನ ಏರಿಯಾಕ್ಕೆ ಬಂದು ನನಗೆ ಭೋದನೆ ಮಾಡುತ್ತೀಯಾ, ಕಾಯ್ದೆ ಕಾನೂನು ನೀನು ಇಟ್ಟುಕೊಳ್ಳು ಎಂದು ಎಸ್ಸೈ ಮೇಲೆ ಕೈ ಮಾಡಲು ಬಂದಿರುವುದಾಗಿ ದೂರಲಾಗಿದೆ.
ಆ ಸಂದರ್ಭ ಎಸ್ಸೈ ಜೊತೆಗಿದ್ದ ಪೊಲೀಸ್ ಸಿಬ್ಬಂದಿ ನಾಗರಾಜ ಎಸ್ಸೈ ಮೇಲೆ ಕೈ ಮಾಡುವುದನ್ನು ತಪ್ಪಿಸಿದರು. ವಿಡಿಯೋ ಮಾಡುತ್ತಿದ್ದ ಮೊಬೈಲ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ದೀಪಕ್ ಸಾಲಿಯಾನ್ ವಿರುದ್ಧ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.