ರೈಲಿನಲ್ಲಿ ಬೆಂಕಿ ಹಚ್ಚಿದ ಪ್ರಕರಣ: ಶಾಹೀನ್ ಬಾಗ್ ಇಲ್ಲಿ ಎನ್ಐಎಯಿಂದ ಶೋಧ ಕಾರ್ಯಾಚರಣೆ

ಹೊಸದಿಲ್ಲಿ, ಮೇ 11: ಕೇರಳದ ಎಳತೂರ್ನಲ್ಲಿ ರೈಲಿನಲ್ಲಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಗುರುವಾರ ದಿಲ್ಲಿಯ ಶಾಹೀನ್ ಬಾಗ್ ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಎನ್ಐಎ ಅಧಿಕಾರಿಗಳು ಬೆಳಗ್ಗಿನಿಂದ ಶಂಕಿತರ ಮನೆಗಳ ಮೇಲೆ ದಾಳಿ ನಡೆಸಿ ಶೋಧಿಸುತ್ತಿದ್ದಾರೆ.
ಎಪ್ರಿಲ್ 2ರಂದು ನಡೆದ ಘಟನೆಗೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಶಾರುಖ್ ಸೈಫಿ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಎನ್ಐಎಯು ತನಿಖೆಯನ್ನು ಕೇರಳ ಪೊಲೀಸರಿಂದ ಎಪ್ರಿಲ್ ಮಧ್ಯ ಭಾಗದಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.
ಆರೋಪಿಯನ್ನು ಆತನ ಧಣಿಗಳು ಕೇರಳಕ್ಕೆ ಕಳುಹಿಸಿದ್ದಾರೆ ಹಾಗೂ ಅವರನು ರಾಜ್ಯದಲ್ಲಿ ಸ್ಥಳೀಯರಿಂದ ಸಾಕಷ್ಟು ನೆರವು ಪಡೆದಿದ್ದಾನೆ ಎನ್ನುವ ಸಂಶಯದ ಆಧಾರದಲ್ಲಿ ಎನ್ಐಎಯು ಅವನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯನ್ನು ಹೇರಿದೆ.
ಆರೋಪಿಯ ವಿರುದ್ಧ ಕಲ್ಲಿಕೋಟೆಯ ಜಿಲ್ಲಾ ಸೆಶನ್ಸ್ ನ್ಯಾಯಾಲಯವೊಂದು ಕೊಲೆ ಆರೋಪ ಹೊರಿಸಿದೆ.
27 ವರ್ಷದ ಸೈಫಿಯು ದಿಲ್ಲಿಯ ಶಾಹೀನ್ ಬಾಗ್ ನಿವಾಸಿಯಾಗಿದ್ದಾನೆ. ರೈಲಿನಲ್ಲಿ ಬೆಂಕಿ ಹಚ್ಚಿ ಪರಾರಿಯಾಗಿದ್ದ ಅವನನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ ಮತ್ತು ಕೇಂದ್ರೀಯ ಗುಪ್ತಚರ ದಳ ಬಂಧಿಸಿತ್ತು.
ಎಪ್ರಿಲ್ 2ರಂದು ಕಲ್ಲಿಕೋಟೆಯ ಎಳತೂರ್ನಲ್ಲಿ ಅಲಪ್ಪುಳ-ಕಣ್ಣೂರು ಎಕ್ಸೆಕ್ಯೂಟಿವ್ ಎಕ್ಸ್ಪ್ರೆಸ್ ರೈಲಿನಲ್ಲಿ ಕೆಲವು ಪ್ರಯಾಣಿಕರ ಮೇಲೆ ದಹನಶೀಲ ದ್ರವ ಸುರಿದು ಬೆಂಕಿ ಹಚ್ಚಿರುವ ಆರೋಪವನ್ನು ಅವನು ಎದುರಿಸುತ್ತಿದ್ದಾನೆ. ಆ ಘಟನೆಯಲ್ಲಿ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ.







