ಮಣಿಪುರದಿಂದ ಮಿಝೋರಾಂಗೆ 3583 ಸಂತ್ರಸ್ತರ ಪಲಾಯನ

ಇಂಫಾಲ,ಮೇ 11: ಕಳೆದ ವಾರ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಮಣಿಪುರದಿಂದ ಒಟ್ಟು 3583 ಮಂದಿ ಮಿರೆರಾಂಗೆ ಪಲಾಯನಗೈದಿದ್ದಾರೆಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ. ಮಿರೆರಾಂನ ಆರು ಜಿಲ್ಲೆಗಳಾದ್ಯಂತ ಸ್ಥಾಪಿಸಲಾಗಿರುವ ತಾತ್ಕಾಲಿಕ ಪರಿಹಾರ ಶಿಬಿರಗಳಲ್ಲಿ ಈ ಸಂತ್ರಸ್ತರನ್ನು ಇರಿಸಲಾಗಿದೆ. ಇನ್ನೂ ಹಲವಾರು ಮಂದಿ ಮಿಝೋರಾಂನಲ್ಲಿರುವ ತಮ್ಮ ಬಂಧುಗಳ ಮನೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಕೊಲಾಸಿಬ್ ಜಿಲ್ಲೆಯಲ್ಲಿ ಒಟ್ಟು 1351 ಮಂದಿ, ಸೈತುವಾಲ್ ಜಿಲ್ಲೆಯಲ್ಲಿ 1214 ಮಂದಿ, ಹಾಗೂ ಇತರ 934 ಮಂದಿ ಐಝ್ವಲ್ ಜಿಲ್ಲೆಯಲ್ಲಿ ಮಣಿಪುರ ಸಂತ್ರಸ್ತರು ಆಶ್ರಯಪಡೆದುಕೊಂಡಿದ್ದಾರೆಂದು ಹೇಳಿಕೆ ತಿಳಿಸಿದೆ.
ಉಳಿದ 84 ಮಂದಿ ಚಂಫಾಯ್, ಸೆರ್ಚಿಪ್ ಹಾಗೂ ಖಾವ್ಝ್ವಲ್ ಜಿಲ್ಲೆಗಳಲ್ಲಿ ಆಶ್ರಯಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮಿಝೋರಾಂ ಈಗಾಗಲೇ ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದ 30 ಸಾವಿರ ನಿರಾಶ್ರಿತರಿಗೆ ಆಶ್ರಯ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕೆಂಬ ಮಣಿಪುರದ ಬಹುಸಂಖ್ಯಾತ ಮೇಟಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಮೇ 3ರಂದು ಬುಡಕಟ್ಟು ಪಂಗಡಗಳು ಮೇ 3ರಂದು ಮಣಿಪುರದ 10 ಜಿಲೆಗಳಲ್ಲಿ ಬುಡಕಟ್ಟು ಏಕತಾ ಪಾದಯಾತ್ರೆಯನ್ನು ನಡೆಸಿದ ಸಂದರ್ಭ ಹಿಂಸಾಚಾರ ಸ್ಫೋಟಿಸಿತ್ತು.
ಇದಕ್ಕೂ ಮೊದಲು ಮೀಸಲು ಅರಣ್ಯ ಜಮೀನಿನಿಂದ ಕುಕಿ ಬುಡಕಟ್ಟು ಗ್ರಾಮಸ್ಥರನ್ನು ತೆರವುಗೊಳಿಸಿರುವ ಕಾರ್ಯಾಚರಣೆಯು ಕೂಡಾ ಉದ್ವಿಗ್ನತೆಗೆೆ ಕಾರಣವಾಗಿತ್ತು. ಮೇಟಿ ಸಮುದಾಯವು ಮಣಿಪುರದ ಒಟ್ಟು ಜನಸಂಖ್ಯೆಯ ಶೇ.52ರಷ್ಟಿದ್ದು ಬಹುತೇಕ ಇಂಫಾಲ ಕಣಿವೆ ಪ್ರದೇಶದಲ್ಲಿ ನೆಲೆಸಿದೆ. ಬುಡಕಟ್ಟು ಪಂಗಡಗಳಾದ ನಾಗಾ ಹಾಗೂ ಕುಕಿಗಳು ಮಣಿಪುರದ ಜನಸಂಖ್ಯೆಯ ಶೇ.40ರಷ್ಟಿದ್ದು, ಪರ್ವತಪ್ರದೇಶಗಳಲ್ಲಿ ವಾಸವಾಗಿದ್ದಾರೆ.







