ಮೇ 13ಕ್ಕೆ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಯಲ್ಲಿ ಮತ ಎಣಿಕೆ: ಉಡುಪಿ ಡಿಸಿ ಕೂರ್ಮಾರಾವ್

ಉಡುಪಿ, ಮೇ 11: ರಾಜ್ಯ ವಿಧಾನಸಭಾ ಚುನಾವಣಾ ಪ್ರಕ್ರಿಯೆಯ ಅಂತಿಮ ಘಟ್ಟವಾದ, ಬುಧವಾರ ನಡೆದ ಮತದಾನದ ಮತಗಳ ಎಣಿಕೆ ಕಾರ್ಯವು ಮೇ 13ರ ಶನಿವಾರ ಬೆಳಗ್ಗೆ 8 ರಿಂದ ನಗರದ ಬ್ರಹ್ಮಗಿರಿಯ ಬಳಿ ಇರುವ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಯಾಗಿರುವ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಚುನಾವಣಾ ವೀಕ್ಷಕರು, ಜಿಲ್ಲೆಯ ಎಲ್ಲಾ 5 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಹಾಗೂ ಅವರ ಏಜೆಂಟ್‌ಗಳ ಸಮ್ಮುಖದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ನಡೆಯಲಿದೆ ಎಂದವರು ತಿಳಿಸಿದರು.
ಮತಗಳ ಎಣಿಕೆಯು ಐವರು ಚುನಾವಣಾಧಿಕಾರಿಗಳು ಹಾಗೂ ಐವರು ಸಹಾಯಕ ಚುನಾವಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಪ್ರತಿಯೊಂದು ಕೊಠಡಿಗಳಲ್ಲಿ ಜರಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು 4 ಟೇಬಲ್ ಗಳಂತೆ ಅಂಚೆ ಮತ ಪತ್ರ ಎಣಿಕೆಗೆ ಕ್ರಮಕೈಗೊಳ್ಳಲಾಗಿದೆ.
ಮತ ಎಣಿಕೆಗಾಗಿ ಒಟ್ಟು 375 ಮತ ಎಣಿಕೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಎಲ್ಲಾ ಮತ ಎಣಿಕೆ ಅಧಿಕಾರಿ, ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದೆ.
ಮೇ 10ರಂದು ನಡೆದ ಮತದಾನದ ಸಂದರ್ಭದಲ್ಲಿ ಮತದಾನವಾದ ಮತಯಂತ್ರಗಳನ್ನು ಸೂಕ್ತ ಭದ್ರತಾ ವ್ಯವಸ್ಥೆಯೊಂದಿಗೆ ಪೊಲೀಸ್ ಅಧೀಕ್ಷಕರ ಉಸ್ತುವಾರಿಯಲ್ಲಿ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಯ ಕೇಂದ್ರದಲ್ಲಿ ಮಾಡಲಾಗಿರುವ ಜಿಲ್ಲಾ ಮಟ್ಟದ ಭದ್ರತಾ ಕೊಠಡಿಯಲ್ಲಿ ವಿಧಾನಸಭಾ ಕ್ಷೇತ್ರವಾರು ಸುರಕ್ಷತೆಯಿಂದ ಇರಿಸಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಭದ್ರತಾ ಕೊಠಡಿಗಳಿಗೆ ಮೂರು ಹಂತದ ಭದ್ರತೆಯನ್ನು ಒದಗಿಸಲಾಗಿದೆ. ಕೇಂದ್ರ ಮೀಸಲು ಪಡೆ, ರಾಜ್ಯ ಮೀಸಲು ಪಡೆ ಹಾಗೂ ಜಿಲ್ಲಾ ಪೊಲೀಸ್ ಸಿಬ್ಬಂದಿಗಳನ್ನು ಇದಕ್ಕಾಗಿ ನೇಮಿಸಲಾಗಿದೆ. ಯಾವುದೇ ಅನಧಿಕೃತ ವ್ಯಕ್ತಿಗಳಿಗೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಕೇವಲ ಅಧಿಕೃತ ಪಾಸ್ ಹೊಂದಿದ ವ್ಯಕ್ತಿಗಳಿಗೆ ಮಾತ್ರ ಮತ ಎಣಿಕೆ ಕೇಂದ್ರ ಪ್ರವೇಶಿಸಲು ಅವಕಾಶವಿರುತ್ತದೆ ಎಂದವರು ತಿಳಿಸಿದ್ದಾರೆ.
ಮತ ಎಣಿಕೆ ದಿನ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂಜಾಗೃತಾ ಕ್ರಮವಾಗಿ ಮೇ 13ರ ಬೆಳಗ್ಗೆ 5ರಿಂದ ಮಧ್ಯರಾತ್ರಿ 12ರವರೆಗೆ ಐಪಿಸಿ ಕಲಂ 144ರಂತೆ ನಿಷೇಧಾಜ್ಞೆ ವಿಧಿಸಲಾಗಿದೆ. ಈ ಸಂದರ್ಭದಲ್ಲಿ ಸಭೆ, ವಿಜಯೋತ್ಸವ ಮೆರವಣಿಗೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಾದ್ಯಂತ ನಿಷೇಧಾಜ್ಞೆ
ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯವು ಮೇ 13ರಂದು ಬ್ರಹ್ಮಗಿರಿಯ ಸೈಂಟ್ ಸಿಸಿಲಿಸ್ ವಿದ್ಯಾಸಂಸ್ಥೆಯಲ್ಲಿ ನಡೆಯಲಿದ್ದು, ಮತ ಎಣಿಕೆ ಕಾರ್ಯವು ಸುಸೂತ್ರವಾಗಿ ನಡೆಯಲು ಹಾಗೂ ನಂತರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಯ್ದಕೊಂಡು, ಶಾಂತಿಯನ್ನು ಕಾಪಾಡುವ ಸಲುವಾಗಿ 1973ರ ಕ್ರಿಮಿನಲ್ ಪ್ರೊಸಿಜರ್ ಕೋಡ್‌ನ ಸೆಕ್ಷನ್ 144 (1) ರನ್ವಯ ಜಿಲ್ಲೆಯಾದ್ಯಂತ ಮೇ 13ರಂದು ಬೆಳಿಗ್ಗೆ 5:00ರಿಂದ ಮಧ್ಯರಾತ್ರಿ 12:00 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶ ಹೊರಡಿಸಿದ್ದಾರೆ.
ಷರತ್ತುಗಳು: ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು 5 ಜನರು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದು ಅಥವಾ ತಿರುಗುವುದನ್ನು ನಿಷೇಧಿಸಲಾಗಿದೆ.
*ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ವಿಜಯೋತ್ಸವ, ಕರಾಳೋತ್ಸವ, ಪ್ರತಿಭಟನಾ ಮೆರವಣಿಗೆ ಹಾಗೂ ವಿಜಯೋತ್ಸವದ ಅಂಗವಾಗಿ ಸಾರ್ವಜನಿಕ ಸಭೆ ಸಮಾರಂಭ ನಡೆಸುವುದನ್ನು ಹಾಗೂ ಯಾವುದೇ ರೀತಿಯ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ.
*ಚುನಾವಣೆಯ ಮತ ಎಣಿಕೆ ವೇಳೆ, ಫಲಿತಾಂಶ ಘೋಷಣೆಯಾಗಿ ವಿಜಯೋತ್ಸವದ ಸಮಯದಲ್ಲಿ ಪಟಾಕಿ/ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಿದೆ. ಈ ಅವಧಿಯಲ್ಲಿ ಯಾವುದೇ ಆಯುಧ, ಮಾರಕಾಯುಧ ಗಳಾದ ಕುಡು ಗೋಲು, ಕಲ್ಲು, ಖಡ್ಗ, ಭರ್ಜಿ, ಕೋಲು, ಚೂರಿ, ದೊಣ್ಣೆ, ಲಾಠಿಗಳನ್ನು ಅಥವಾ ದೈಹಿಕ ಹಿಂಸೆಗೆ ಕಾರಣವಾಗುವ ಮಾರಕ ವಸ್ತುಗಳನ್ನು ಧರಿಸುವುದು ಮತ್ತು ಯಾವುದೇ ಸ್ಫೋಟಕ ವಸ್ತುಗಳು/ಪಟಾಕಿ, ಸಿಡಿಮದ್ದು ಹೊಂದುವು ದನ್ನು ನಿಷೇಧಿಸಲಾಗಿದೆ.
*ಈ ನಿಷೇದಾಜ್ಞೆ ಆದೇಶವು ಸರಕಾರದಿಂದ ಯಾ ಸರಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯ ಕ್ರಮ, ಸಭೆ, ಸಮಾರಂಭಗಳಿಗೆ ಅನ್ವಯಿಸುವುದಿಲ್ಲ. ಮತ್ತು ಸರಕಾರಿ ನೌಕರರು ಕರ್ತವ್ಯ ನಿರ್ವಹಣೆಯ ವೇಳೆ ಲಾಠಿಗಳನ್ನು ಉಪಯೋಗಿಸುವುದಕ್ಕೆ ಅನ್ವಯಿಸು ವುದಿಲ್ಲ. ಅಲ್ಲದೇ ಸೂಕ್ತ ಅಧಿಕಾರಿಗಳ ಪೂರ್ವಾನುಮತಿ ಪಡೆದು ನಡೆಯುವ ಕಾರ್ಯಕ್ರಮಗಳಿಗೆ ಹಾಗೂ ಶವ ಮೆರವಣಿಗೆ, ಮದುವೆ ಮೆರವಣಿಗೆ ಮತ್ತು ಧಾರ್ಮಿಕ ಸಮಾರಂಭಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.







