ಶನಿವಾರ ಮತ ಎಣಿಕೆ: ಬೆಂಗಳೂರು ನಗರದಾದ್ಯಂತ ನಿಷೇಧಾಜ್ಞೆ ಜಾರಿ
ಬೆಂಗಳೂರು, ಮೇ 11: ವಿಧಾನಸಭಾ ಚುನಾವಣೆಯ ಮತ ಎಣಿಕೆ ಮೇ 13ರ ಬೆಳಗ್ಗೆ 8ಗಂಟೆಯಿಂದ ಆರಂಭವಾಗಲಿದ್ದು, ಆ ಸಮಯದಲ್ಲಿ ಕಿಡಿಗೇಡಿಗಳು ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ಪರವಾಗಿ ಪ್ರತಿಭಟನೆ ಮಾಡುವ ಸಾಧ್ಯತೆ ಇರುವುದರಿಂದ ಬೆಂಗಳೂರು ನಗರದಾದ್ಯಂತ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಗುರುವಾರ ಈ ಸಂಬಂಧ ಆದೇಶ ಹೊರಡಿಸಿರುವ ಅವರು, ‘ರಾಜ್ಯ ಗುಪ್ತವಾರ್ತೆ ಮಾಹಿತಿ ಆಧರಿಸಿ ಮೇಲ್ಕಂಡ ಕ್ರಮಕ್ಕೆ ಮುಂದಾಗಿದ್ದು, ಮತ ಎಣಿಕೆ ದಿನ ಬೆಂಗಳೂರಿನಾದ್ಯಂತ 5 ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಮದುವೆ ಹಾಗೂ ಶವ ಸಂಸ್ಕಾರವನ್ನು ಹೊರತುಪಡಿಸಿ ಯಾವುದೇ ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಅಲ್ಲದೆ, ಯಾವುದೇ ಮಾರಾಕಾಸ್ತ್ರಗಳನ್ನು ಒಯ್ಯುವುದು ನಿಷೇಧಿಸಲಾಗಿದೆ.
ಪಟಾಕಿಯಂತಹ ಸ್ಪೋಟಕ ವಸ್ತುಗಳ ಸಾಗಾಟ, ಪಟಾಕಿ ಹೊಡೆಯುವುದು, ಪ್ರತಿಕೃತಿ ಪ್ರದರ್ಶನ, ದಹನ, ಬಹಿರಂಗ ಘೋಷಣೆ ಕೂಗುವುದು, ಸಂಗೀತ ನುಡಿಸುವುದು, ಸನ್ನೆ ಮಾಡುವುದು, ಭಿತ್ತಿಪತ್ರ ಪ್ರದರ್ಶನ ನಿಷೇಧ ಮಾಡಲಾಗಿದ್ದು, ಮೇ 13ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರ ವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.