ದ.ಕ.ಜಿಲ್ಲಾದ್ಯಂತ ಗುಡುಗು ಸಹಿತ ಭಾರೀ ಮಳೆ

ಮಂಗಳೂರು: ದ.ಕ.ಜಿಲ್ಲೆಯ ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕಿನ ವಿವಿಧೆಡೆ ಗುರುವಾರ ರಾತ್ರಿ ಗುಡುಗು ಸಹಿತ ಭಾರೀ ಮಳೆಯಾಗಿದೆ.
ವಾಯುಭಾರ ಕುಸಿತದಿಂದಾಗಿ ಮುಂಗಾರುಪೂರ್ವ ಮಳೆಯು ಬಿರುಸು ಪಡೆದಿದ್ದು, ಗುರುವಾರ ರಾತ್ರಿ ನಗರದ ಹಲವು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿದಿದೆ.
ನಗರದ ಸ್ಮಾರ್ಟ್‌ಸಿಟಿ ಕಾಮಗಾರಿಯ ಅವಾಂತರಕ್ಕೆ ಈ ಮಳೆ ಸಾಕ್ಷಿಯಾಗಿದ್ದು, ಅನೇಕ ಕಡೆ ಮಳೆ ನೀರು ಸರಾಗವಾಗಿ ಹರಿದು ಹೋಗಲಾಗದೆ ರಸ್ತೆಯಲ್ಲೇ ನಿಂತಿವೆಯಲ್ಲದೆ ಅಪೂರ್ಣ ಕಾಮಗಾರಿಯ ಪ್ರದೇಶಗಳಲ್ಲಿ ನೀರು ನಿಂತು ಅಪಾಯಕ್ಕೆ ಆಹ್ವಾನಿಸುವಂತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಎಡಬಿಡದೆ ಸುರಿದ ರಭಸದ ಮಳೆ ಮತ್ತು ಮಿಂಚು ಸಹಿತ ಸಿಡಿಲಿನ ಆರ್ಭಟಕ್ಕೆ ಸಾರ್ವಜನಿಕರು, ವಾಹನಿಗರು ಸಮಸ್ಯೆ ಎದುರಿಸುವಂತಾಯಿತು.
ಮುನ್ನೆಚ್ಚರಿಕೆಯ ಕ್ರಮವಾಗಿ ಮಳೆಯ ಅಬ್ಬರಕ್ಕೆ ನಗರದಲ್ಲಿ ವಿದ್ಯುತ್ ಸಂಪರ್ಕವನ್ನು ಕೂಡ ಕೆಲಕಾಲ ಕಡಿತಗೊಳಿಸಲಾಯಿತು. ಹಠಾತ್ ಸುರಿದ ಭಾರೀ ಮಳೆಯಿಂದಾಗಿ ದ್ವಿಚಕ್ರ ವಾಹನಿಗರಲ್ಲದೆ ಸಾರ್ವಜನಿಕರು ಸಕಾಲಕ್ಕೆ ವಾಸಸ್ಥಾನಕ್ಕೆ ತಲುಪಲಾಗದೆ ಪರದಾಡುವಂತಾಗಿದೆ.
ನಗರದ ಸ್ಟೇಟ್‌ಬ್ಯಾಂಕ್, ಹಂಪನಕಟ್ಟೆ, ಜ್ಯೋತಿ, ಬಲ್ಮಠ, ಕಂಕನಾಡಿ, ಪಂಪ್‌ವೆಲ್, ಲಾಲ್‌ಬಾಗ್ ಅಲ್ಲದೆ ಹೊರವಲಯದ ಬೆಂಗರೆ, ಪಣಂಬೂರು, ಕೂಳೂರು, ಕಾವೂರು, ತೊಕ್ಕೊಟ್ಟು, ಉಳ್ಳಾಲ, ದೇರಳಕಟ್ಟೆ, ಕುತ್ತಾರ್, ಕೊಣಾಜೆ, ತಲಪಾಡಿ, ಸೋಮೇಶ್ವರ, ಕೋಟೆಕಾರ್, ಕಣ್ಣೂರು, ಅಡ್ಯಾರ್, ಫರಂಗಿಪೇಟೆ ಸಹಿತ ನಾನಾ ಕಡೆ ಬಿರುಸಿನ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದ ಜನತೆ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.