ಅನುಕೂಲಕರ ವಾತಾವರಣ ನಿರ್ಮಿಸದ ತಂದೆಗೆ ಮಗಳನ್ನು ವಶಕ್ಕೆ ಕೇಳಲು ಅವಕಾಶವಿಲ್ಲ: ಹೈಕೋರ್ಟ್

ಬೆಂಗಳೂರು, ಮೇ 11: ಮಗಳಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸದ ತಂದೆಗೆ ಮಗಳನ್ನು ತನ್ನ ವಶಕ್ಕೆ ನೀಡಬೇಕೆಂದು ವಾದ ಮಂಡಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಗಳನ್ನು ತಂದೆ ಮತ್ತು ತಾಯಿಯೊಂದಿಗೆ ಸಮಾನವಾಗಿ ನೆಲೆಸುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ತಂದೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಅರ್ಜಿಯನ್ನು ವಜಾಗೊಳಿಸಿದೆ.
ಒಂಭತ್ತು ವರ್ಷದ ಹೆಣ್ಣು ಮಗುವಿಗೆ ಸೌಹಾರ್ದಯುತ ವಾತಾವರಣ ನಿರ್ಮಿಸಲು ಸಾಧ್ಯವಾಗದ ತಂದೆ, ಮಗುವನ್ನು ವಶಕ್ಕೆ ಕೇಳುವುದಕ್ಕೆ ಅರ್ಹರಿರುವುದಿಲ್ಲ. ಹೀಗಾಗಿ ಹೆಣ್ಣು ಮಗು ತಾಯಿಯೊಂದಿಗೆ ಇರಬೇಕಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಜತೆಗೆ, ಈ ಪ್ರಕರಣದಲ್ಲಿ ಕಳೆದ ಐದು ವರ್ಷಗಳಿಂದ(ಮಗು 4 ವರ್ಷವಿದ್ದಾಗಿನಿಂದ) ತಂದೆ-ತಾಯಿ ಪ್ರತಿ ದಿನ ಜಗಳವಾಡುತ್ತಿರುವುದನ್ನು ಗಮನಿಸುತ್ತಿದೆ. ಪೋಷಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಬೌದ್ಧಿಕ ಶಕ್ತಿ ಮಕ್ಕಳಲ್ಲಿ ಇರುವುದಿಲ್ಲ. ಅಲ್ಲದೆ, ಮಗುವಿನ ಸಾಮಾಜಿಕ, ಭೌತಿಕ, ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಪೆÇೀಷಕರು ಸದಾಕಾಲ ಶ್ರಮಿಸಬೇಕು. ಹೀಗಾಗಿ, ಹೆಣ್ಣು ಮಗು ತನ್ನ ತಾಯಿಯೊಂದಿಗೆ ನೆಲೆಸಲು ಆದ್ಯತೆ ನೀಡಬೇಕಾಗುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಂತರ್ ಧರ್ಮೀಯ ದಂಪತಿ 2005ರಲ್ಲಿ ವಿವಾಹವಾಗಿದ್ದು, 2014ರಲ್ಲಿ ಮಗು ಜನಿಸಿತ್ತು. ದಂಪತಿ ನಡುವೆ ಉಂಟಾದ ಮನಃಸ್ತಾಪದಿಂದ ಪತ್ನಿ ನಾಲ್ಕು ವರ್ಷದ ಮಗುವಿನೊಂದಿಗೆ ಪ್ರತ್ಯೇಕವಾಗಿ ನೆಲೆಸಿದ್ದರು. ಇದಾದ ಬಳಿಕ ಮಗುವನ್ನು ತನ್ನ ವಶಕ್ಕೆ ಪಡೆಯಲು ಪತಿ ನ್ಯಾಯಾಂಗ ಹೋರಾಟ ಪ್ರಾರಂಭಿಸಿ, ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.







