ಆತ್ಮಕಥೆಯಲ್ಲಿ ಕಳಂಕಹಚ್ಚುವ ಹೇಳಿಕೆ ನೀಡಿದ ಆರೋಪ: ಮಾಜಿ ಸಿಜೆಐ ಗೊಗೊಯಿ ವಿರುದ್ಧ ಮಾನನಷ್ಟ ಮೊಕದ್ದಮೆ

ಗುವಾಹಟಿ,ಮೇ 11: ತನ್ನ ವಿರುದ್ಧ ತಪ್ಪು ಹೇಳಿಕೆಗಳನ್ನು ಪ್ರಕಟಿಸಿದ್ದಕ್ಕಾಗಿ ಅಸ್ಸಾಂ ಸಾರ್ವಜನಿಕ ಕಾಮಗಾರಿಗಳ ಅಧ್ಯಕ್ಷ (APW) ಅಭಿಜಿತ್ ಸರ್ಮಾ ಅವರು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ರಾಜ್ಯಸಭಾ ಸಂಸದ ರಂಜನ್ ಗೊಗೊಯಿ ಅವರ ಆತ್ಮಕತೆ ಪುಸ್ತಕದ ಪ್ರಕಟಣೆಗೆ ತಡೆ ಹಾಗೂ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ರಂಜನ್ ಗೊಗೊಯಿ ಅವರ ಆತ್ಮಕಥೆ ‘ ಜಸ್ಟೀಸ್ ಫಾರ್ ಎ ಜಡ್ಜ್’ನಲ್ಲಿ ತನ್ನ ವಿರುದ್ಧ ತಪ್ಪುದಾರಿಗೆಳೆಯುವ ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಗೊಗೊಯಿ ಹಾಗೂ ರೂಪಾ ಪಬ್ಲಿಕೇಶನ್ಸ್ ವಿರುದ್ಧ ಶರ್ಮಾ ಅವರು ಕಾಮರೂಪ ಮೆಟ್ರೋ ಜಿಲ್ಲಾ ನ್ಯಾಯಾಲಯದಲ್ಲಿ ಮಾನಹಾನಿ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
ಗೊಗೊಯಿ ಅವರ ಆತ್ಮಕಥೆಯ ಪ್ರಕಟಣೆ, ವಿತರಣೆ ಅಥವಾ ತನ್ನ ವಿರುದ್ಧ ಯಾವುದೇ ಮಾನಹಾನಿಕರವಾದ ಹೇಳಿಕೆಗಳನ್ನು ಒಳಗೊಂಡ ಪುಸ್ತಕಗಳನ್ನು ಪ್ರಕಟಿಸದಂತೆಯೂ ಗೊಗೊಯಿ ಹಾಗೂ ಪ್ರಕಾಶಕ ಸಂಸ್ಥೆ ರೂಪಾ ಪಬ್ಲಿಕೇಶನ್ಸ್ ಗೆ ತಡೆಯಾಜ್ಡೆ ತರಬೇಕೆಂದು ಸರ್ಮಾ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಅರ್ಜಿಗೆ ಸಂಬಂಧಿಸಿ ನ್ಯಾಯಾಲಯವು ಅರ್ಜಿದಾರರು ಹಾಗೂ ಪ್ರತಿವಾದಿಗಳಿಗೆ ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆಯ ಮುಂದಿನ ದಿನಾಂಕವನ್ನು ಜೂನ್ 3ಕ್ಕೆ ನಿಗದಿಪಡಿಸಿದೆ.







