‘ಮತದಾನ’ ಛಾಯಾಚಿತ್ರ ಸ್ಪರ್ಧೆಗೆ ಮೇ 20 ಕೊನೆ ದಿನ

ಬೆಂಗಳೂರು, ಮೇ 11: ವಿಧಾನಸಭೆ ಚುನಾವಣೆ ಅಂಗವಾಗಿ ಛಾಯಾಗ್ರಾಹಕರಿಗೆ ಚುನಾವಣಾ ಆಯೋಗವು ‘ಮತದಾನ’ದ ವಿಷಯದ ಬಗ್ಗೆ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಅತ್ಯುತ್ತಮ ಛಾಯಾಚಿತ್ರಗಳನ್ನು ಕಳುಹಿಸಲು ಮೇ 20 ಕೊನೆಯ ದಿನವಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಿರುವ ಪತ್ರಿಕಾ ಛಾಯಾಗ್ರಾಹಕರು ಅಥವಾ ಹವ್ಯಾಸಿ ಛಾಯಾಗ್ರಹಕರು ತಾವು ತೆಗೆದ ಗರಿಷ್ಠ 5 ಅತ್ಯುತ್ತಮ ಛಾಯಾಚಿತ್ರಗಳನ್ನು ಸೂಕ್ತ ಶೀರ್ಷಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡಿರುವ ಪತ್ರಿಕಾ ಮಾನ್ಯತಾ ಕಾರ್ಡ್ ಅಥವಾ ಮಾಧ್ಯಮ ಕಚೇರಿ ನೀಡಿರುವ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಹಾಗೂ ಸ್ವ ವಿಳಾಸದೊಂದಿಗೆ ಮೇ 20ರ ಶನಿವಾರ ಸಂಜೆ 5 ಗಂಟೆಯೊಳಗೆ ktkceomedia2023@gmail.com ಗೆ ಕಳುಹಿಸಲು ಆಯೋಗ ಕೋರಿದೆ.
ಆಯ್ಕೆಯಾಗುವ ಛಾಯಾಚಿತ್ರಗಳಿಗೆ ಪಥಮ ಬಹುಮಾನ 25ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂ. ಹಾಗೂ ಸಮಾಧಾನಕರ ಬಹುಮಾನ 6 ಸಾವಿರ ರೂ. ಮತ್ತು ವಿಶೇಷ ಬಹುಮಾನ 5ಸಾವಿರ ರೂ.ಸೇರಿದಂತೆ ಒಟ್ಟು ಬಹುಮಾನದ ಮೊತ್ತ 61 ಸಾವಿರ ರೂ. ಒಳಗೊಂಡಿರುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತರ ಕಚೇರಿಯ ಅಧಿಕೃತ ಪ್ರಕಟನೆ ತಿಳಿಸಿದೆ.





