ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಸಂಪರ್ಕದಲ್ಲಿವೆ: ಹೊಸ ಬಾಂಬ್ ಸಿಡಿಸಿದ ಜೆಡಿಎಸ್

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭ್ಯವಾಗುವ ಸಾಧ್ಯತೆ ಇಲ್ಲ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ, ಅಧಿಕಾರಕ್ಕಾಗಿ ಪೈಪೋಟಿ ನಡೆಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಜೆಡಿಎಸ್ ಜತೆ ಸಂಪರ್ಕದಲ್ಲಿವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಕ್ಷ ಪ್ರಕಟಿಸಿದೆ. ಜತೆಗೆ ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ.
ಒಂದೇ ಹಂತದ ನಡೆದ ಮತದಾನ ಪೂರ್ಣವಾಗುತ್ತಿದ್ದಂತೇ ಕುಮಾರಸ್ವಾಮಿ ಬುಧವಾರ ರಾತ್ರಿ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. "ಯಾವ ಪಕ್ಷ ಬೆಂಬಲಿಸಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸೂಕ್ತ ಸಮಯದಲ್ಲಿ ಅದನ್ನು ಬಹಿರಂಗಪಡಿಸಲಾಗುತ್ತದೆ" ಎಂದು ಪಕ್ಷದ ಮುಖಂಡ ತನ್ವೀರ್ ಅಹ್ಮದ್ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಆದರೆ ಈ ಪ್ರತಿಪಾದನೆಯನ್ನು ಬಿಜೆಪಿ ಅಲ್ಲಗಳೆದಿದ್ದು, ತಮ್ಮ ಪಕ್ಷ ಸಂಪೂರ್ಣ ಬಹುಮತ ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಮೈತ್ರಿಯ ಪ್ರಶ್ನೆಯೇ ಇಲ್ಲ. ಬಿಜೆಪಿ, ಜೆಡಿಎಸ್ ಪಕ್ಷವನ್ನು ಸಂಪರ್ಕಿಸಿಯೇ ಇಲ್ಲ ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಮತ್ತೊಂದು ಸಂದರ್ಶನದಲ್ಲಿ ಹೇಳಿದ್ದಾರೆ.
"ಖಚಿತವಾಗಿ ನಾವು 120 ಸ್ಥಾನಗಳನ್ನು ಗೆಲ್ಲಲಿದ್ದೇವೆ. ನಮ್ಮ ಕಾರ್ಯಕರ್ತರಿಂದ ನಿನ್ನೆ ಪಡೆದ ಮಾಹಿತಿಯಂತೆ 120 ಸ್ಥಾನ ಗಳಿಸುವುದು ನಿಶ್ಚಿತ ಎಂಬ ನಿರ್ಧಾರಕ್ಕೆ ನಾವು ಬಂದಿದ್ದೇವೆ" ಎಂದು ವಿವರಿಸಿದ್ದಾರೆ. ಆದರೆ ಬಿಜೆಪಿ ಸರ್ಕಾರ ರಚನೆಗಾಗಿ ತಮ್ಮ ಪಕ್ಷವನ್ನು ಸಂಪರ್ಕಿಸಿದೆ ಎಂದು ಜೆಡಿಎಸ್ ಪುನರುಚ್ಚರಿಸಿದೆ.
"ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ನಮ್ಮನ್ನು ಸಂಪರ್ಕಿಸಲು ಮುಂದಾಗಿವೆ. ಎರಡೂ ಪಕ್ಷಗಳು ಇಂದು ಜೆಡಿಎಸ್ ಬೆಂಬಲ ಯಾಚಿಸುವ ಸ್ಥಿತಿ ಇಂದು ಇದೆ" ಎಂದು ತನ್ವೀರ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ.