ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳೊಂದಿಗೆ ಮೈತ್ರಿ ಸಾಧ್ಯತೆ ತಳ್ಳಿ ಹಾಕಿದ ನವೀನ್ ಪಟ್ನಾಯಕ್

ಹೊಸದಿಲ್ಲಿ: ಮುಂಬರುವ 2024 ರ ರಾಷ್ಟ್ರೀಯ ಚುನಾವಣೆಗೆ ಪ್ರತಿಪಕ್ಷಗಳೊಂದಿಗೆ ಕೆಲಸ ಮಾಡುವ ಸಾಧ್ಯತೆಯನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್(Naveen Patnaik) ಇಂದು ತಳ್ಳಿ ಹಾಕಿದ್ದಾರೆ, ತನ್ನ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಹಾಗೂ ಇದು "ಯಾವಾಗಲೂ ಅದರ ಯೋಜನೆಯಾಗಿದೆ" ಎಂದು ಘೋಷಿಸಿದರು.
ದಿಲ್ಲಿ ಪ್ರವಾಸದಲ್ಲಿರುವ ಪಟ್ನಾಯಕ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಇದನ್ನು ಸೌಜನ್ಯದ ಭೇಟಿ ಎಂದು ಅವರು ಕರೆದಿದ್ದಾರೆ.
ಬಿಜೆಡಿ ತನ್ನ "ಸಮಾನವಾದ" ನಿಲುವನ್ನು ಉಳಿಸಿಕೊಳ್ಳುತ್ತದೆಯೇ ಎಂದು ಸುದ್ದಿಗಾರರು ಕೇಳಿದಾಗ, "ಇದು ಯಾವಾಗಲೂ ನಮ್ಮ ಯೋಜನೆಯಾಗಿದೆ ಎಂದರು.
76 ವರ್ಷದ ಹಿರಿಯ ರಾಜಕಾರಣಿ ಪಟ್ನಾಯಕ್ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಥವಾ ಕಾಂಗ್ರೆಸ್ ಅನ್ನು ಬೆಂಬಲಿಸುವ ವಿಚಾರದಲ್ಲಿ ತಟಸ್ಥ ನಿಲುವು ತಾಳುತ್ತಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾದ ಎರಡು ದಿನಗಳ ನಂತರ ತನ್ನ ನಿಲುವು ಶೀಘ್ರವೇ ಬದಲಾಗದು ಎಂದು ಪಟ್ನಾಯಕ್ ಹೇಳಿದ್ದಾರೆ.
ನವೀನ್ ಪಟ್ನಾಯಕ್ ಅವರ ಘೋಷಣೆಯು 2024 ರಲ್ಲಿ ಭಾರತದಾದ್ಯಂತ ಬಿಜೆಪಿ ವಿರುದ್ಧ ವಿಪಕ್ಷಗಳನ್ನು ಒಗ್ಗೂಡಿಸುವ ನಿತೀಶ್ ಕುಮಾರ್ ಅವರ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ.







