ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಇಸ್ಲಾಮಾಬಾದ್: ಇಮ್ರಾನ್ ಖಾನ್ ಬಂಧನವನ್ನು ಕಾನೂನು ಬಾಹಿರ ಎಂದು ಪಾಕ್ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಒಂದು ದಿನದ ನಂತರ ಇಮ್ರಾನ್ ಖಾನ್ ಅವರಿಗೆ ಜಾಮೀನು ದೊರೆತಿದೆ.
ನ್ಯಾಯಾಧೀಶರು ಇಮ್ರಾನ್ ಖಾನ್‌ಗೆ ಜಾಮೀನು ಮಂಜೂರು ಮಾಡಿದ್ದು, ಮುಂದಿನ ಎರಡು ವಾರಗಳವರೆಗೆ ಅದೇ ಆರೋಪಗಳ ಮೇಲೆ ಅವರನ್ನು ಪುನಃ ಬಂಧಿಸಬಾರದೆಂಬ ಷರತ್ತು ವಿಧಿಸಿದೆ. ಕಳೆದ ಮಂಗಳವಾರದಿಂದ ಮೇ 17 ರವರೆಗೆ ದಾಖಲಾಗುವ ಯಾವುದೇ ಆರೋಪದ ಮೇಲೆ ಅವರನ್ನು ಬಂಧಿಸುವಂತಿಲ್ಲ ಎಂದೂ ನ್ಯಾಯಾಲಯ ಹೇಳಿದೆ.
ಮಂಗಳವಾರ ಇಸ್ಲಾಮಾಬಾದ್‌ನ ನ್ಯಾಯಾಲಯಕ್ಕೆ ವಿಚಾರಣೆಯೊಂದಕ್ಕೆ ಆಗಮಿಸುತ್ತಿದ್ದಂತೆ ಇಮ್ರಾನ್ ಖಾನ್ ಅವರನ್ನು ನಾಟಕೀಯವಾಗಿ ಬಂಧಿಸಲಾಗಿತ್ತು. ಪಾಕ್ ಮಾಜಿ ಪ್ರಧಾನಿಯ ಈ ಬಂಧನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರ ಬೆಂಬಲಿಗರು ಭಾರೀ ಪ್ರತಿಭಟನೆಯನ್ನು ನಡೆಸಿದ್ದರು.
ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದಾಗ ರಾಜ್ಯದ ಉಡುಗೊರೆಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಿದ್ದಾರೆ ಎಂದು ಪಾಕಿಸ್ತಾನದ ಚುನಾವಣಾ ಆಯೋಗವು ಆರೋಪಿಸಿ, ಪ್ರಕರಣ ದಾಖಲಿಸಿದೆ.