'ದಿ ಕೇರಳ ಸ್ಟೋರಿ'ಯನ್ನು ಯಾಕೆ ನಿಷೇಧಿಸಲಾಗಿದೆ?: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ಹೊಸದಿಲ್ಲಿ: 'ದಿ ಕೇರಳ ಸ್ಟೋರಿ' ಸಿನಿಮಾವನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಿರುವುದರ ಹಿಂದಿನ ತಾರ್ಕಿಕತೆ ಏನೆಂದು ಸುಪ್ರೀಂ ಕೋರ್ಟ್ ಇಂದು ಪ್ರಶ್ನಿಸಿದೆ. "ಪಶ್ಚಿಮ ಬಂಗಾಳವು ಚಲನಚಿತ್ರವನ್ನು ಏಕೆ ನಿಷೇಧಿಸಬೇಕು? ಇದು ದೇಶಾದ್ಯಂತ ಪ್ರದರ್ಶನ ನಡೆಯುತ್ತಿದೆ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ಪೀಠವು ಕೇಳಿದೆ. ಈ ಕುರಿತು, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ.
ತಮಿಳುನಾಡಿನಲ್ಲಿ ಚಲನಚಿತ್ರವನ್ನು ನಿಷೇಧಿಸಲಾಗಿಲ್ಲವಾದರೂ, ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಚಿತ್ರವನ್ನು ಪ್ರದರ್ಶಿಸದಿರಲು ಥಿಯೇಟರ್ ಮಾಲಕರು ನಿರ್ಧರಿಸಿದ್ದಾರೆ, ಇದಕ್ಕೆ ಚಿತ್ರದ ನಿರ್ಮಾಪಕರು ಆಕ್ಷೇಪ ಎತ್ತಿದ್ದರು.
'ದಿ ಕೇರಳ ಸ್ಟೋರಿ' ಚಿತ್ರವನ್ನು ನಿಷೇಧಿಸಿರುವ ಪಶ್ಚಿಮ ಬಂಗಾಳ ಸರ್ಕಾರವು, ಚಿತ್ರವು "ಶಾಂತಿ ಭಂಗವನ್ನು ಉಂಟುಮಾಡುವ ಸಾಧ್ಯತೆಯಿದೆ" ಎಂದು ಹೇಳಿತ್ತು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಯಾವುದೇ ದ್ವೇಷ ಅಥವಾ ಹಿಂಸಾಚಾರದ ಘಟನೆ ನಡೆಯದಿರಲು ಚಲನಚಿತ್ರದ ಪ್ರದರ್ಶನವನ್ನು ನಿಷೇಧಿಸಲಾಗಿದೆ ಎಂದು ಸರ್ಕಾರ ಸೋಮವಾರ ಅಧಿಸೂಚನೆಯಲ್ಲಿ ತಿಳಿಸಿತ್ತು.





