ʼಮುಸ್ಲಿಂ ವ್ಯಕ್ತಿಯಿಂದ ಮಹಿಳೆಯ ಮತಾಂತರ ಯತ್ನʼ ಎಂಬ ಸುದ್ದಿ ನಿರ್ಬಂಧಿಸಲು ಸಾಮಾಜಿಕ ಮಾಧ್ಯಮಗಳಿಗೆ ಹೈಕೋರ್ಟ್ ಆದೇಶ

ಹೊಸದಿಲ್ಲಿ: ಮುಸ್ಲಿಂ ವ್ಯಕ್ತಿಯೊಬ್ಬ ಮಹಿಳೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುವಂತೆ ಒತ್ತಾಯಿಸಿದ ಕುರಿತಾದಂತಹ ಸುದ್ದಿ ವರದಿಗಳು ಮತ್ತು ವೀಡಿಯೊಗಳ ಲಿಂಕ್‌ಗಳನ್ನು ನಿರ್ಬಂಧಿಸುವಂತೆ ದಿಲ್ಲಿ ಹೈಕೋರ್ಟ್ ಮೇ 12 ರಂದು ಟ್ವಿಟರ್ ಮತ್ತು ಗೂಗಲ್ ಸೇರಿದಂತೆ ಕೆಲವು ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ದೇಶನ ನೀಡಿದೆ ಎಂದು thehindu ವರದಿ ಮಾಡಿದೆ.
ಈ ಬಗ್ಗೆ ಆನ್‌ಲೈನ್‌ನಲ್ಲಿ ಲಭ್ಯವಿರುವ ಸುದ್ದಿ ವರದಿಗಳು ಮತ್ತು ವೀಡಿಯೊಗಳ ಕುರಿತು ವೀಕ್ಷಕರು ಮಾಡಿದ ಕಾಮೆಂಟ್‌ಗಳಲ್ಲಿ ತೀವ್ರ ಬೆದರಿಕೆ ಇದೆ ಎಂದು ಪರಿಗಣಿಸಿ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಈ ಆದೇಶವನ್ನು ಜಾರಿಗೊಳಿಸಿದರು.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEITY), ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (PCI), ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (NBDSA) ಮತ್ತು Google LLC, Twitter Inc ಗೆ ಹೈಕೋರ್ಟ್ ನೋಟಿಸ್ ನೀಡಿದೆ.
ಸುದರ್ಶನ್ ನ್ಯೂಸ್ ಮುಖ್ಯಸ್ಥ ಸುರೇಶ್ ಚವ್ಹಾಂಕೆ, ಒಡಿಶಾ ಟೆಲಿವಿಷನ್ ಲಿಮಿಟೆಡ್, ಪಿಟ್ಟಿ ಮೀಡಿಯಾ LLP, ಭಾರತ್ ಪ್ರಕಾಶನ್ (ದಿಲ್ಲಿ) ಲಿಮಿಟೆಡ್‌ನ ಆರ್ಗನೈಸರ್, ವಾಯ್ಸ್ ಆಫ್ ದಿ ನೇಷನ್‌ನ ಮಾಲೀಕರಿಗೆ ನೋಟಿಸ್ ನೀಡಿದೆ.
ಮಹಿಳೆ ಸಲ್ಲಿಸಿರುವ ಅತ್ಯಾಚಾರ ಪ್ರಕರಣವನ್ನು ಎದುರಿಸುತ್ತಿರುವ ಪುರುಷ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸಲು ಕಕ್ಷಿದಾರರಿಗೆ ಹೈಕೋರ್ಟ್ ಸೂಚಿಸಿದ್ದು, ಮೇ 24 ರಂದು ಹೆಚ್ಚಿನ ವಿಚಾರಣೆಗೆ ಪಟ್ಟಿಮಾಡಿದೆ.
ಖ್ಯಾತ ಶಾಸ್ತ್ರೀಯ ಸಂಗೀತ ಶಿಕ್ಷಕನೆಂದು ಹೇಳಿಕೊಳ್ಳುವ ಅರ್ಜಿದಾರ ಅಜ್ಮತ್ ಅಲಿ ಖಾನ್, ಏಪ್ರಿಲ್ 19 ರಂದು ದಿಲ್ಲಿ ನಿವಾಸಿ ಮಹಿಳೆ ತನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ ಕುರಿತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಕಟವಾದ ಮತ್ತು ಪ್ರಸಾರವಾದ ಸುದ್ದಿಗಳು ಮತ್ತು ವೀಡಿಯೊಗಳನ್ನು ತೆಗೆದುಹಾಕುವಂತೆ ಕೋರಿದ್ದರು.
ಇಡೀ ಕಥೆಗೆ ಕೋಮು ಆಯಾಮವನ್ನು ನೀಡುವ ಮೂಲಕ ಇಂತಹ ಪ್ರಸಾರ ನಡೆಸಲಾಗುತ್ತಿದೆ ಮತ್ತು ಸಮುದಾಯಗಳಲ್ಲಿ ದ್ವೇಷ ಪ್ರಚೋದಿಸಲು ಇದನ್ನು ಮಾಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.