ಅಮೆರಿಕದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆ ಮೃತ್ಯು

ಬೆಂಗಳೂರು: ಅಮೆರಿಕದಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ 69 ವರ್ಷದ ಮಹಿಳೆಯೊಬ್ಬರು ವಾಯುಮಾರ್ಗದ ಮಧ್ಯೆ ವಿಮಾನದಲ್ಲೇ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ. ಏರ್ ಇಂಡಿಯಾದ ಅತ್ಯಂತ ಸುಧೀರ್ಘ ವಾಯುಯಾನ ಮಾರ್ಗ ಎನಿಸಿದ ಸ್ಯಾನ್‌ಫ್ರಾನ್ಸಿಸ್ಕೊ- ಬೆಂಗಳೂರು ನಡುವೆ ಸಂಚರಿಸುವ ಎಐ 176 ವಿಮಾನವನ್ನು ಮಹಿಳೆ ಮಂಗಳವಾರ ತಮ್ಮ ಮಗನ ಜತೆ ಏರಿದ್ದರು ಎಂದು ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ಹೇಳಿವೆ.
"ಬುಧವಾರ ಮಧ್ಯರಾತ್ರಿಯ ವೇಳೆ ಮಾರ್ಗ ಮಧ್ಯದಲ್ಲಿ ವೈದ್ಯಕೀಯ ತುರ್ತು ಸನ್ನಿವೇಶ ಸೃಷ್ಟಿಯಾಯಿತು. ವಿಮಾನದ ಸಿಬ್ಬಂದಿ ಎಲ್ಲ ನೆರವನ್ನೂ ನೀಡಿದರು. ಆದರೆ ಮಹಿಳೆ ವಿಮಾನದಲ್ಲೇ ಮೃತಪಟ್ಟರು" ಎಂದು ಏರ್ ಇಂಡಿಯಾ ಅಧಿಕಾರಿಗಳು ವಿವರಿಸಿದ್ದಾರೆ.
ಗುರುವಾರ ಬೆಳಿಗ್ಗೆ 7.30ರ ವೇಳೆಗೆ ವಿಮಾನ ಕೆಐಎನಲ್ಲಿ ಇಳಿಯುವ ಮುನ್ನ ಪೈಲಟ್‌ಗಳು ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಆ್ಯಂಬುಲೆನ್ಸ್‌ನಲ್ಲಿ ಮಹಿಳೆಯ ಮೃತದೇಹವನ್ನು ವಿಮಾನ ನಿಲ್ದಾಣ ಆಸ್ಪತ್ರೆಗೆ ಸಾಗಿಸಿ, ಬಳಿಕ ಸರ್ಕಾರಿ ಆಸ್ಪತ್ರೆಗೆ ಅಟಾಪ್ಸಿಗಾಗಿ ಸಾಗಿಸಲಾಯಿತು ಎಂದು ವಿಮಾನ ನಿಲ್ದಾಣದ ಮೂಲಗಳು ಹೇಳಿವೆ.
ಮಾರ್ಗಮಧ್ಯದಲ್ಲಿ ಇದ್ದಕ್ಕಿದ್ದಂತೆ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಸಹಜ ಕಾರಣದಿಂದ ಅವರು ಮೃತಪಟ್ಟಿರಬೇಕು ಎಂದು ಮೂಲಗಳು ತಿಳಿಸಿವೆ.







