ಗಾಂಧಿ ಬಝಾರ್ ಪಾದಚಾರಿ ಮಾರ್ಗ: ವಿಸ್ತರಣೆಗೆ ಹೈಕೋರ್ಟ್ ನಿರ್ಬಂಧ

ಬೆಂಗಳೂರು, ಮೇ 12: ನಗರದ ಬಸವನಗುಡಿಯ ಗಾಂಧಿ ಬಝಾರ್ ರಸ್ತೆ ನವೀಕರಣ ಕಾಮಗಾರಿ ವೇಳೆ ಪಾದಚಾರಿ ಮಾರ್ಗವನ್ನು 40 ಅಡಿ ಅಗಲಕ್ಕೆ ವಿಸ್ತರಿಸುವ ಕಾರ್ಯಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿ ಮಧ್ಯಂತರ ಆದೇಶ ನೀಡಿದೆ.
ಗಾಂಧಿ ಬಝಾರ್‍ನ ಅಂಗಡಿ ಮಳಿಗೆ ಮಾಲಕ ಎಲ್.ಗುಂಡುರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಮಧ್ಯಂತರ ಆದೇಶ ಹೊರಡಿಸಿದೆ.
ಅಲ್ಲದೆ, ಸರಕಾರದ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್, ಗಾಂಧಿ ಬಝಾರ್ ನ ನವೀಕರಣದ ನೆಪದಲ್ಲಿ ಬಿಬಿಎಂಪಿ ಮುಖ್ಯ ರಸ್ತೆಯನ್ನು ಕಿರಿದು ಮಾಡಿ ಪಾದಚಾರಿ ಮಾರ್ಗ ಅಗಲೀಕರಣ ಮಾಡುತ್ತಿದೆ. 800 ಮೀಟರ್ ಉದ್ದದ ರಸ್ತೆಯಲ್ಲಿ 100 ಅಡಿ ಅಗಲದ ರಸ್ತೆ ಇತ್ತು, ಅದನ್ನು 23 ಅಡಿಗೆ ಇಳಿಕೆ ಮಾಡಿ, ಪಾದಚಾರಿ ಮಾರ್ಗವನ್ನು ಒಂದು ಕಡೆ 40 ಅಡಿ ಹಾಗೂ ಇನ್ನೊಂದು ಕಡೆ 35 ಅಡಿ ಅಗಲ ಮಾಡಲಾಗುತ್ತಿದೆ ಎಂದು ವಾದ ಮಂಡಿಸಿದರು.
ಅಲ್ಲದೆ, ಇದು ಇಂಡಿಯನ್ ರೋಡ್ ಕಾಂಗ್ರೆಸ್‍ನ ನಿಯಮಗಳಿಗೆ ವಿರುದ್ಧವಾಗಿದೆ. ಮುಖ್ಯ ರಸ್ತೆ ತೀರಾ ಕಿರಿದಾಗುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡಲಾಗುತ್ತದೆ. ಇದರಿಂದ ಈಗಾಗಲೇ ಇರುವ ಅಂಗಡಿ ಮಳಿಗೆಗಳಿಗೆ ಸಾರ್ವಜನಿಕರು ಬರಲಾಗುವುದಿಲ್ಲ. ಜನ ಸಾಮಾನ್ಯರಿಗೆ ತೀವ್ರ ತೊಂದರೆ ಆಗಲಿದೆ. ಹೀಗಾಗಿ, ಪಾದಚಾರಿ ಮಾರ್ಗ ಅಗಲೀಕರಣ ಮಾಡದಂತೆ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಕೋರಿದರು.
ವಕೀಲರ ವಾದ ಆಲಿಸಿದ ನ್ಯಾಯಾಪೀಠವು ಮಧ್ಯಂತರ ಆದೇಶ ನೀಡಿದೆ. ವಿಚಾರಣೆ ವೇಳೆ ನ್ಯಾಯಮೂರ್ತಿ ಶಿವಶಂಕರೇಗೌಡ ಅವರು, ಚೆನ್ನಾಗಿರುವ ರಸ್ತೆಯನ್ನೆಲ್ಲ ಹಾಳು ಮಾಡಿಟ್ಟಿದ್ದೀರಿ, ಅಲ್ಲಿ ಹೇಗೆ ಜನರು ಓಡಾಡ್ತಾರೆ, ಏಕೆ ಹೀಗೆ ಮಾಡಲಾಗಿದೆ. ಮರಗಳನ್ನು ಹಾಳು ಮಾಡಿದ್ದೀರಿ, ಪಾಲಿಕೆ ಏಕೆ ಹೀಗೆ ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುತ್ತಿದೆ ಎಂದು ಪಾಲಿಕೆಯ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.







