ಮೇ 13ರಂದು ಸೈಂಟ್ ಸಿಸಿಲೀಸ್‌ನಲ್ಲಿ ಉಡುಪಿ ಜಿಲ್ಲೆಯ ಮತಗಳ ಎಣಿಕೆ: ಡಿಸಿ ಕೂರ್ಮಾರಾವ್
ʼಬೆಳಗ್ಗೆ 5ರಿಂದ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆʼ

ಉಡುಪಿ, ಮೇ 12: ರಾಜ್ಯ ವಿಧಾನಸಭಾ ಚುನಾವಣೆಗೆ ಬುಧವಾರ ನಡೆದ ಮತದಾನದ ಮತಗಳ ಎಣಿಕೆ ನಾಳೆ ಬ್ರಹ್ಮಗಿರಿಯಲ್ಲಿರುವ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಯಲ್ಲಿ ಬೆಳಗ್ಗೆ 8:00 ಗಂಟೆಗೆ ಪ್ರಾರಂಭಗೊಳ್ಳಲಿದ್ದು, ಜಿಲ್ಲೆಯ 1111 ಮತಗಟ್ಟೆಗಳಲ್ಲಿ ದಾಖಲಾಗಿರುವ ಮತಗಳ ಎಣಿಕೆಯು ಒಟ್ಟು 81 ಸುತ್ತುಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರು ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೈಂದೂರು ಕ್ಷೇತ್ರದ 246 ಮತಗಟ್ಟೆಗಳ ಮತ ಎಣಿಕೆ 18 ಸುತ್ತುಗಳಲ್ಲಿ ನಡೆದರೆ, ಕುಂದಾಪುರದ 222 ಮತಗಟ್ಟೆಗಳಲ್ಲಿ ಬಿದ್ದಿರುವ ಮತಗಳ ಎಣಿಕೆ 16 ಸುತ್ತುಗಳಲ್ಲಿ ಮುಗಿಯಲಿದೆ. ಉಡುಪಿಯ 226 ಮತಗಟ್ಟೆಗಳ ಮತ ಎಣಿಕೆ 17, ಕಾಪುವಿನ 208 ಮತಗಟ್ಟೆಗಳ ಹಾಗೂ ಕಾರ್ಕಳದ 209 ಮತಗಟ್ಟೆಗಳ ಮತ ಎಣಿಕೆ ಕಾರ್ಯ ತಲಾ 15 ಸುತ್ತುಗಳಲ್ಲಿ ಪೂರ್ಣಗೊಳ್ಳಲಿದೆ ಎಂದವರು ವಿವರಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರಗಳ ಮತಗಳ ಎಣಿಕೆಗೆ ತಲಾ 14 ಟೇಬಲ್‌ಗಳಂತೆ ಒಟ್ಟು 70 ಟೇಬಲ್‌ಗಳನ್ನು ಬಳಸಲಾಗುತ್ತದೆ. ಮತ ಎಣಿಕೆಯನ್ನು ಒಟ್ಟು ಎಂಟು ಕೊಠಡಿಗಳಲ್ಲಿ ನಡೆಸಲಾಗುತ್ತದೆ. ಉಡುಪಿ, ಕಾಪು ಹಾಗೂ ಕಾರ್ಕಳ ಕ್ಷೇತ್ರಗಳ ಮತ ಎಣಿಕೆಗೆ ತಲಾ ಎರಡು ಕೊಠಡಿಗಳನ್ನು ಬಳಸಿದರೆ, ಬೈಂದೂರು ಹಾಗೂ ಕುಂದಾಪುರ ಕ್ಷೇತ್ರಗಳ ಮತ ಎಣಿಕೆಯನ್ನು ದೊಡ್ಡದಾದ ಒಂದೇ ಹಾಲ್‌ನ್ನು ಬಳಸಲಾಗುತ್ತದೆ ಎಂದರು.
ಇದರೊಂದಿಗೆ ಅಂಚೆ ಮತಗಳ ಎಣಿಕೆಗೆ ಪ್ರತಿ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ತಲಾ ನಾಲ್ಕು ಟೇಬಲ್‌ಗಳನ್ನು ಒದಗಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 9707 ಅಂಚೆ ಮತಗಳು ಬಂದಿವೆ. ಇವುಗಳಲ್ಲಿ 80+ ಹಿರಿಯ ನಾಗರಿಕರಲ್ಲಿ ಅಂಚೆಮತಕ್ಕೆ ಒಪ್ಪಿದ 4060 ಮಂದಿಯಲ್ಲಿ ಮತ ಹಾಕಿದ 3942 ಮಂದಿಯ ಮತಗಳು, 756 ಪಿಡಬ್ಲ್ಯುಡಿ ಮತದಾರರಲ್ಲಿ ಮತ ಹಾಕಿದ 750 ಮಂದಿಯ ಮತಗಳು ಹಾಗೂ 5776 ಪೋಲಿಂಗ್ ಅಧಿಕಾರಿ ಗಳಲ್ಲಿ ಇದುವರೆಗೆ ತಲುಪಿರುವ 4973 ಮಂದಿಯ ಅಂಚೆ ಮತಗಳು ಸೇರಿವೆ ಎಂದರು.
ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಸೈಂಟ್ ಸಿಸಿಲೀಸ್ ಸಂಸ್ಥೆಯಲ್ಲಿ ಬೆಳಗ್ಗೆ 8:00ಗಂಟೆಗೆ ಚುನಾವಣಾ ವೀಕ್ಷಕರು, ಜಿಲ್ಲೆಯ ಎಲ್ಲಾ 5 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಹಾಗೂ ಅವರ ಏಜೆಂಟ್ ಗಳ ಸಮ್ಮುಖದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಪ್ರಾರಂಭಗೊಳ್ಳಲಿದೆ ಎಂದವರು ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಉಸ್ತುವಾರಿಯಲ್ಲಿ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಮತ ಎಣಿಕೆ ಕೇಂದ್ರಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಮತದಾನವಾದ ಮತಯಂತ್ರಗಳನ್ನು ಭದ್ರತಾ ಕೊಠಡಿಗಳಲ್ಲಿ ಸುರಕ್ಷತೆಯಿಂದ ಇರಿಸಲಾಗಿದೆ.
ಮತ ಎಣಿಕೆ ಕೊಠಡಿಗಳಲ್ಲಿ ಮತ ಎಣಿಕೆಯನ್ನು ಸುರಕ್ಷಿತವಾಗಿ ನಡೆಸಲು ಮತ ಎಣಿಕೆ ಅಧಿಕಾರಿ ಹಾಗೂ ಮತ ಎಣಿಕೆ ಏಜೆಂಟರುಗಳ ನಡುವೆ ಮೆಸ್ ಹಾಕಿ ಭದ್ರತೆ ಮಾಡಲಾಗಿದೆ. ಎಲ್ಲಾ ಮತ ಎಣಿಕೆ ಕೊಠಡಿಗಳಿಗೂ ಸಿಸಿಟಿವಿ ಕೆಮರಾವನ್ನು ಅಳವಡಿಸಲಾಗಿದೆ.
ಮತ ಎಣಿಕೆಯು ಐವರು ಚುನಾವಣಾಧಿಕಾರಿಗಳು ಹಾಗೂ ಐವರು ಸಹಾಯಕ ಚುನಾವಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಪ್ರತಿಯೊಂದು ಕೊಠಡಿಗಳಲ್ಲಿ ಜರಗಲಿದೆ. ಮತ ಎಣಿಕೆಗಾಗಿ ಒಟ್ಟು 375 ಮತ ಎಣಿಕೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಎಲ್ಲಾ ಮತ ಎಣಿಕೆ ಅಧಿಕಾರಿ, ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದೆ ಎಂದರು.
ಮತ ಎಣಿಕೆ ಕೇಂದ್ರಕ್ಕೆ ಚುನಾವಣಾಧಿಕಾರಿಯಿಂದ ನೀಡಲಾದ ಅಧಿಕೃತ ಗುರುತಿನ ಚೀಟಿ ಇದ್ದಲ್ಲಿ ಮಾತ್ರ ಪ್ರವೇಶಿಸಲು ಅವಕಾಶವಿದೆ. ಮೊಬೈಲ್, ಬೀಡಿ, ಸಿಗರೇಟ್, ಬೆಂಕಿಪೊಟ್ಟಣ, ಕತ್ತರಿ, ಬ್ಲೇಡ್, ಸಿಗರ್‌ಲೈಟ್‌ಗಳನ್ನು ಕೊಂಡೊಯ್ಯುವಂತಿಲ್ಲ. ಮತ ಎಣಿಕೆ ಕೇಂದ್ರದಿಂದ 100 ಮೀ. ಸುತ್ತಲೂ ವಾಹನ ಸಂಚಾರ ರಹಿತ ‘ಪಾದಚಾರಿಗಳ ವಲಯ’ ಎಂದು ಗುರುತಿಸಲಾಗಿದೆ ಎಂದವರು ಹೇಳಿದರು.
ಮತ ಎಣಿಕೆ ದಿನ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು,ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಮೇ 13ರ ಬೆಳಗ್ಗೆ 5:00ರಿಂದ ಮಧ್ಯರಾತ್ರಿ 12:00ರವರೆಗೆ ಐಪಿಸಿ ಕಲಂ 144ರಂತೆ ನಿಷೇಧಾಜ್ಞೆ ವಿಧಿಸಲಾಗಿದೆ. ಈ ಸಂದರ್ಭದಲ್ಲಿ ಸಭೆ, ವಿಜಯೋತ್ಸವ ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಅಲ್ಲದೇ ಮೇ 12ರ ಮಧ್ಯರಾತ್ರಿ 12:00ರಿಂದ 13ರ ಮಧ್ಯರಾತ್ರಿ 12:00ರವರೆಗೆ ಮದ್ಯ ಸಾಗಾಟ ಹಾಗೂ ಮಾರಾಟ ನಿಷೇಧಿಸಿ ‘ಒಣ ದಿನ’ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ ಮಚ್ಚೀಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಪ್ರೊಬೇಷನರಿ ಐಎಎಸ್ ಅಧಿಕಾರಿ ಯತೀಶ್ ಉಪಸ್ಥಿತರಿದ್ದರು.
ಮತ ಎಣಿಕೆ: ಬಂದೋಬಸ್ತ್‌ಗೆ 1500 ಸಿಬ್ಬಂದಿಗಳು
ನಾಳೆ ನಡೆಯುವ ಮತ ಎಣಿಕೆಯ ಸಂದರ್ಭದಲ್ಲಿ ಬಂದೋಬಸ್ತ್‌ಗಾಗಿ 1500 ಸಿಬ್ಬಂದಿಗಳನ್ನು ನೇಮಿಸಲಾಗಿದೆ. 2 ಕಂಪೆನಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲದೇ ಡಿಎಆರ್ ಹಾಗೂ ಕೆಎಸ್‌ಆರ್‌ಪಿ ಸಿಬ್ಬಂದಿಗಳನ್ನು ಸಹ ಭದ್ರತೆಗೆ ನೇಮಿಸಲಾಗಿದೆ ಎಂದು ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ ತಿಳಿಸಿದರು.
ನಾಳೆ ಅಭ್ಯರ್ಥಿಯ ಗೆಲುವಿನ ಬಳಿಕ ನಡೆಯುವ ವಿಜಯೋತ್ಸವ, ಪಟಾಕಿ ಸಿಡಿತ ಹಾಗೂ ವಿಜಯೋತ್ಸವ ಮೆರವಣಿಗೆ ನಡೆಯುವ ಬಗ್ಗೆ ಪ್ರಶ್ನಿಸಿದಾಗ, ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ವಿಧಿಸಿದ್ದಾರೆ ನಾವು ಅದನ್ನು ಅನುಷ್ಠಾನ ಗೊಳಿಸುತ್ತೇವೆ ಎಂದರು.
ನಾಳೆ ನಡೆಯುವ ಮತ ಎಣಿಕೆಯ ಫಲಿತಾಂಶದ ಕುರಿತಂತೆ, ವಿಜಯಿ ಅಭ್ಯರ್ಥಿಯ ಕುರಿತಂತೆ ನಡೆಯುತ್ತಿರುವ ಬೆಟ್ಟಿಂಗ್ ನಿಯಂತ್ರಣದ ಕುರಿತು ಪ್ರಶ್ನಿಸಿದಾಗ, ಬೆಟ್ಟಿಂಗ್‌ಗೆ ಅವಕಾಶವಿಲ್ಲ. ಅವಕಾಶ ಬಳಸಿ ಇದು ನಡೆದಿರುವುದು ಗೊತ್ತಾದರೆ ತಕ್ಷಣ ಸೂಕ್ತ ಕ್ರಮಕೈಗೊಳ್ಳುತ್ತೇವೆ. ನಾವು ಈ ವಿಷಯವನ್ನು ಸೂಕ್ಷ್ಮವಾಗಿ ಅವಲೋಕಿಸುತಿದ್ದೇವೆ ಎಂದು ಹಾಕೆ ತಿಳಿಸಿದರು.
