ಖಾಸಗಿ ಕಾಲೇಜಿನೊಂದಿಗೆ ಬೆಂ.ಉತ್ತರ ವಿವಿಯ ಕುಲಸಚಿವ, ಕುಲಪತಿ ಶಾಮೀಲು: ವಿದ್ಯಾರ್ಥಿಗಳ ಆರೋಪ
''ಹೆಚ್ಚುವರಿ ಹಣ ಪಾವತಿ ಮಾಡದಿದ್ದರೆ, ಪರೀಕ್ಷಾ ಶುಲ್ಕ ಪಾವತಿಗೆ ಅವಕಾಶವಿಲ್ಲ''

ಬೆಂಗಳೂರು, ಮೇ 12: ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯವು ಪರೀಕ್ಷಾ ಶುಲ್ಕವನ್ನು ಯುಯುಸಿಎಂಎಸ್ ಪೋರ್ಟಲ್ ಪಾವತಿ ಮಾಡಲು ಮೇ 13ರ ವರೆಗೆ ಅವಕಾಶವನ್ನು ಕಲ್ಪಿಸಿದ್ದು, ಖಾಸಗಿ ಕಾಲೇಜಿನ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಪಾವತಿ ಮಾಡಲು ಅವಕಾಶವನ್ನು ಕಲ್ಪಿಸಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.
ವಿವಿಯು ಮೇ 4ರಿಂದ ಮೇ 13ರ ವರೆಗೆ ದಂಡ ರಹಿತವಾಗಿ, ಮೇ 15ರಂದು 200ರೂ.ಗಳ ದಂಡದೊಂದಿಗೆ ಹಾಗೂ ಮೇ 16ರಂದು 500ರೂ.ಗಳ ದಂಡದೊಂದಿಗೆ ಸ್ನಾತಕೋತ್ತರ ಪದವಿಗಳ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ವಿವಿ ವ್ಯಾಪ್ತಿಯಲ್ಲಿ ಬರುವ ಕೆ.ಆರ್.ಪುರಂನ ಬೆಂಗಳೂರು ಸಿಟಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಲು ಪೋರ್ಟಲ್‍ನಲ್ಲಿ ವಿಷಯಗಳನ್ನು ಸೇರ್ಪಡೆ ಮಾಡಿ, ಪರೀಕ್ಷಾ ಶುಲ್ಕ ಪಾವತಿಗೆ ಅಪ್ರೋವ್ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.
ವಿವಿಯು ನಿಗಧಿಪಡಿಸಿದ ಶುಲ್ಕವನ್ನು ಪಾವತಿ ಮಾಡಿದ ಸರಕಾರಿ ಕೋಟಾದಲ್ಲಿ ಪ್ರವೇಶ ವಿದ್ಯಾರ್ಥಿಗಳಿಗೆ ಕಾನೂನುಬಾಹಿರವಾಗಿ ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡುವಂತೆ ಕಾಲೇಜಿನ ಆಡಳಿತ ಮಂಡಳಿಯು ಒತ್ತಾಯಿಸುತ್ತಿದೆ. ಈ ರೀತಿ ಕಾನೂನುಬಾಹಿರವಾಗಿ ವಿಧಿಸುತ್ತಿರುವ ಶುಲ್ಕವನ್ನು ಪಾವತಿ ಮಾಡದೆ ಇರುವ ವಿದ್ಯಾರ್ಥಿಗಳಿಗೆ ಪೋರ್ಟಲ್‍ನಲ್ಲಿ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಲು ಅವಕಾಶ ಕಲ್ಪಿಸುವುದಿಲ್ಲ. ಈ ವಿಷಯವನ್ನು ಹಲವಾರು ಬಾರಿ ಕುಲಪತಿಗಳಿಗೆ ಪತ್ರ ಬರೆದರೂ, ಖಾಸಗಿ ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಶಾಮೀಸಲಾಗಿ ಕ್ರಮ ವಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು ಸಿಟಿ ಕಾಲೇಜಿನಲ್ಲಿ ವಿವಿ ವತಿಯಿಂದ ಸರಕಾರಿ ಕೋಟಾದಲ್ಲಿ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆದಿರುತ್ತಾರೆ. ಇವರು ವಿವಿಯು ನಿಗಧಿಪಡಿಸಿದ ಪ್ರವೇಶ ಶುಲ್ಕವನ್ನು ಪಾವತಿ ಮಾಡಿರುತ್ತಾರೆ. ಆದರೆ ಹೆಚ್ಚುವರಿಯಾಗಿ 16 ಸಾವಿರ ರೂ.ಗಳಿಂದ 6 ಸಾವಿರ ರೂ.ಗಳವರೆಗೆ ಹೆಚ್ಚುವರಿ ಹಣವನ್ನು ಕಾನೂನುಬಾಹಿರವಾಗಿ ಹಣವನ್ನು ಪಾವತಿ ಮಾಡುವಂತೆ ಆಡಳಿತ ಮಂಡಳಿಯು ಒತ್ತಾಯಿಸುತ್ತಿದ್ದು, ಈ ಹಣವನ್ನು ಪಾವತಿ ಮಾಡದಿದ್ದರೆ, ಪರೀಕ್ಷೆ ಶುಲ್ಕವನ್ನು ಪಾವತಿ ಮಾಡಲು ಅವಕಾಶ ನೀಡುವುದಿಲ್ಲ. ಪರೀಕ್ಷಾ ಶುಲ್ಕವನ್ನು ಪಾವತಿ ಮಾಡದಿದ್ದಲ್ಲಿ, ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು.
ಈ ಹಿಂದೆಯೂ ಬೆಂಗಳೂರು ಸಿಟಿ ಕಾಲೇಜಿನಲ್ಲಿ ಇದೇ ಸಮಸ್ಯೆ ಎದುರಾಗಿತ್ತು. ಆಗ ವಿದ್ಯಾರ್ಥಿಗಳು ವಿವಿಗೆ ದೂರು ಸಲ್ಲಸಿತ್ತು. ವಿವಿಯು ಕಾಲೇಜಿನ ಪ್ರಾಂಶುಪಾಲರಿಗೆ ನೋಟೀಸ್ ನೀಡಿ, ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ, ಕಾನೂನುಬಾಹಿರವಾಗಿ ವಿಧಿಸುವ ಶುಲ್ಕವನ್ನು ಪಾವತಿ ಮಾಡಬೇಕಾಗಿ ಬಂದಿತು. ಈಗಲೂ ಇದೇ ರೀತಿಯಾಗಿ ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡುವಂತೆ ಒತ್ತಾಯಿಸುತ್ತಿದೆ ಎಂದು ವಿವರಿಸಿದ್ದಾರೆ.
ಈ ಕುರಿತು ವಿಚಾರಿಸಲು ವಿವಿಯ ಕುಲಸಚಿವರಿಗೆ ಕರೆ ಮಾಡಿದಾಗ ಕರೆಯನ್ನು ತಿರಸ್ಕರಿಸಿದ್ದಾರೆ.
‘ವಿದ್ಯಾರ್ಥಿಗಳು ವಿವಿಗೆ ಸಲ್ಲಿಸಿರುವ ದೂರಿನ ಅನ್ವಯ ಕಾಲೇಜಿಗೆ ನೋಟೀಸ್ ನೀಡಿದೆ, ಹೊರತಾಗಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕುಲಸಚಿವರು ಕಾಲೇಜು ನೋಟೀಸ್‍ಗೆ ಉತ್ತರವನ್ನು ನೀಡಿದೆ ಎಂದು ತಿಳಿಸುತ್ತಿದ್ದಾರೆ. ಆದರೆ ಯಾವ ಉತ್ತರವನ್ನು ನೀಡಿದೆ ಎಂದು ಇಂದಿಗೂ ಬಹಿರಂಗಪಡಿಸುತ್ತಿಲ್ಲ. ವಿವಿಯ ಕುಲಪತಿ ನಿರಂಜನ ವಾನಳ್ಳಿ, ಪ್ರಭಾರಿ ಕುಲಸಚಿವ ಎನ್.ನರಸಿಂಹ ಮೂರ್ತಿ ಅವರ ವರ್ತನೆಯನ್ನು ಗಮನಿಸುತ್ತಿದ್ದರೆ, ಅವರು ಖಾಸಗಿ ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಶಾಮೀಲಾಗಿರಬಹುದು’ ಎಂದು ವಿದ್ಯಾರ್ಥಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.