ಮಂಗಳೂರು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಜೋಡಿ ಮೃತ್ಯು

ಮಂಗಳೂರು, ಮೇ 12: ನಗರದ ಪಂಪ್‌ವೆಲ್ ಬಳಿ ಕೆಲವು ದಿನಗಳ ಹಿಂದೆ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಜೋಡಿಯೊಂದು ಚಿಕಿತ್ಸೆ ಫಲಕಾರಿಯಾಗದೆ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿರುವುದಾಗಿ ಕಂಕನಾಡಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಜಪ್ಪು ಬಪ್ಪಾಲ್‌ನ ಸಫ್ರೀನಾ (22) ಮತ್ತು ಬಂಟ್ವಾಳದ ನಿಹಾಲ್ (19) ಮೃತಪಟ್ಟಿರುವ ಜೋಡಿ ಎಂದು ಗುರುತಿಸಲಾಗಿದೆ. ಇವರು ಮೇ 7ರಂದು ಪಂಪ್‌ವೆಲ್ ಬಳಿ ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡಿದ್ದ ಈ ಜೋಡಿಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನಿಹಾಲ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಸಫ್ರೀನಾ ಮನೆಯಲ್ಲೇ ಇದ್ದರು ಎನ್ನಲಾಗಿದೆ. ಇವರಿಬ್ಬರೂ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಕೃತ್ಯಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story