ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಬಹುಮಾನ ವಿತರಣೆ

ಉಡುಪಿ, ಮೇ 12: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಉತ್ತಮ ಮತದಾನವಾಗುವಂತೆ ನೋಡಿಕೊಂಡ ಬಿಎಲ್‌ಓಗಳಿಗೆ ಸನ್ಮಾನ ಕಾರ್ಯಕ್ರಮ ಇಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೂರ್ಮಾರಾವ್ ಎಂ. ಅವರು ಮಾತನಾಡಿ, ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ನಡೆದ ವಿಭಿನ್ನ ಕಾರ್ಯಕ್ರಮಗಳು ದೇಶದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಯಾಕಿಂಗ್‌ನಂಥ ಕಾರ್ಯಕ್ರಮವನ್ನು ಕೇಂದ್ರ ಚುನಾವಣಾ ಆಯೋಗವೂ ಮೆಚ್ಚಿಕೊಂಡಿದೆ. ಎಂದರು.
ಶತಾಯುಷಿ ಮತದಾರರಿಗೆ ಸನ್ಮಾನ, ವಿಭಿನ್ನ ಥೀಮ್‌ನ ಮತಗಟ್ಟೆಗಳನ್ನು ವೈವಿಧ್ಯಮಯವಾಗಿ ಸಿಂಗಾರಗೊಳಿಸಿ ಜನರನ್ನು ಮತಗಟ್ಟೆಯತ್ತ ಸೆಳೆಯುವಲ್ಲಿಯೂ ಸ್ವೀಪ್ ಸಮಿತಿಯ ಕಾರ್ಯ ಪ್ರಶಂಸನೀಯ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಮಾತನಾಡಿ, ಜಿಲ್ಲೆಯ ಬಿಎಲ್‌ಓಗಳು ಅತ್ಯುತ್ತಮ ವಾಗಿ ಕಾರ್ಯನಿರ್ವಹಿಸಿದ್ದಾರೆ. ಗ್ರಾಮದ ಕಟ್ಟ ಕಡೆಯ ಮತದಾರರಲ್ಲೂ ಜಾಗೃತಿ ಮೂಡಿಸಿ ಅವರು ಮತದಾನ ಮಾಡುವಂತೆ ಪ್ರೇರೇಪಿಸಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವೀಪ್ ಸಮಿತಿಯ ಅಧ್ಯಕ್ಷ ಹಾಗೂ ಜಿಪಂ ಸಿಇಓ ಪ್ರಸನ್ನ ಎಚ್. ಮಾತನಾಡಿ, ಜಿಲ್ಲೆಯ ಸ್ವೀಪ್ ಸಮಿತಿ ವಿಭಿನ್ನ ಕಾರ್ಯಕ್ರಮದ ಮೂಲಕ ನಾಡಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಶಾಲೆಗಳ ಗೋಡೆಗಳಲ್ಲಿ ಚಿತ್ರ, ಭಿತ್ತಿಚಿತ್ರ ಬಿಡಿಸುವ ಕಾರ್ಯಕ್ರಮ ನಾಡಿನ ಎಲ್ಲರ ಗಮನ ಸೆಳೆದಿದೆ. ಜಿಲ್ಲೆಯ 158 ಶಾಲೆಗಳ ಗೋಡೆಗಳ ಮೇಲೆ ವೈವಿಧ್ಯಮಯ, ಆಕರ್ಷಕ ಚಿತ್ರಗಳನ್ನು ಬಿಡಿಸಲಾಯಿತು. ಜಿಲ್ಲೆಯ ಚಿತ್ರಕಲಾ ಶಿಕ್ಷಕರು ಇದರಲ್ಲಿ ವಿಶೇಷ ಮುತುವರ್ಜಿ ತೋರಿಸಿದರು ಎಂದರು.
ಅಲ್ಲದೇ ಸಮಿತಿ ಮೊದಲ ಬಾರಿ ಈ-ಪೇಪರ್‌ನ್ನು ತಂದು ಸ್ವೀಪ್ ಕಾರ್ಯಕ್ರಮಗಳ ಬಗ್ಗೆ ಎಲ್ಲರಿಗೂ ಮಾಹಿತಿ ಗಳನ್ನು ನೀಡಿತು. ಸಮಿತಿ ಕಿರು ಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದೆ. ಕಯಾಕಿಂಗ್ ಮೂಲಕ ಮತದಾನ ಜಾಗೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಯಶಸ್ಸಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯವರ ಪಾತ್ರವೂ ದೊಡ್ಡದಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರೋಬೇಷನರಿ ಐಎಎಸ್ ಅಧಿಕಾರಿ ಯತೀಶ್, ಜಿಲ್ಲಾ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿಪಂ ಲೆಕ್ಕಾಧಿಕಾರಿ ಪ್ರಸನ್ನ ಭಕ್ತ, ಡಯಟ್‌ನ ಗೋವಿಂದ ಮಡಿವಾಳ ಉಪಸ್ಥಿತರಿದ್ದರು. ಜಿಲ್ಲಾ ಸ್ವೀಪ್ ಸಮಿತಿಯ ಸಂಪನ್ಮೂಲ ವ್ಯಕ್ತಿ ಡಾ.ಅಶೋಕ ಕಾಮತ್ ಅತಿಥಿಗಳನ್ನು ಸ್ವಾಗತಿಸಿದರು.







