ಮಲ್ಲಮ್ಮ ಜೀವನ ಮೌಲ್ಯ ಸ್ತ್ರೀಕುಲಕ್ಕೆ ನೀಡಿದ ಕೊಡುಗೆ: ಉಡುಪಿ ಅಪರ ಜಿಲ್ಲಾಧಿಕಾರಿ ವೀಣಾ

ಉಡುಪಿ, ಮೇ 12: ಹೇಮರೆಡ್ಡಿ ಮಲ್ಲಮ್ಮ ಅವರ ಜೀವನ ಮೌಲ್ಯಗಳು ಸ್ತ್ರೀ ಕುಲಕ್ಕೆ ನೀಡಿದ ಅಮೂಲ್ಯ ಕೊಡುಗೆ ಗಳಾಗಿವೆ ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎನ್ ಹೇಳಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ಬುಧವಾರ ನಡೆದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆಯಲ್ಲಿ, ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಮಹಾಶಿವಶರಣೆಯಾಗಿ ಬೆಳಗಿದ ಹೇಮರೆಡ್ಡಿ ಮಲ್ಲಮ್ಮ 12ನೇ ಶತಮಾನದ ಶಿವಶರಣರಂತೆ ವಚನಗಳನ್ನು ರಚಿಸಿಲ್ಲವಾದರೂ ಅವರ ಬದುಕೇ ಒಂದು ಬೃಹತ್ ವಚನ ಸಂಪುಟದಂತಿದೆ.ತೆಲುಗಿನ ಕವಿ ಹಾಗೂ ಸಾಹಿತಿ ವೇಮನನನ್ನು ಮಗನಂತೆ ಕಂಡು ಮಹಾಯೋಗಿಯನ್ನಾಗಿ ಪರಿವರ್ತಿಸಿದ ಮಹಾಮಾತೆ ಇವರು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಮರೆಡ್ಡಿ ಮಲ್ಲಮ್ಮರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ, ಡಯಟ್ ಉಪ ಪ್ರಾಂಶುಪಾಲ ಅಶೋಕ ಕಾಮತ್, ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಯು.ಸಿ ನಿರಂಜನ, ಕನ್ನಡ ಸಾಹಿತ್ಯ ಪರಿಷತ್‌ನ ನರಸಿಂಹ ಮೂರ್ತಿ, ರಾಘವೇಂದ್ರ ಪ್ರಭು ಕರ್ವಾಲು, ಸಮುದಾಯದ ಪ್ರತಿನಿಧಿ ಸಂಗನಗೌಡ ಮುಂತಾದವರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಂದಿಸಿದರು.