ಬೇಸಿಗೆ ಶಿಬಿರದಿಂದ ಮಕ್ಕಳ ಪ್ರತಿಭೆ ಅನಾವರಣ: ಬಿ.ಹೆಚ್.ಕೃಷ್ಣಪ್ಪ

ಉಡುಪಿ, ಮೇ 12: ಮಕ್ಕಳು ಬೇಸಿಗೆ ಶಿಬಿರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಅವರ ಪ್ರತಿಭೆ ಸಮಾಜದಲ್ಲಿನ ಜನರಿಗೆ ತಿಳಿಯು ವುದರೊಂದಿಗೆ, ಮಕ್ಕಳ ಶ್ರೇಯೋಭಿವೃದ್ಧಿ ಹೆಚ್ಚುತ್ತದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ.ಎಚ್ ಕೃಷ್ಣಪ್ಪ ಹೇಳಿದ್ದಾರೆ.
ನಗರದ ಜಿಲ್ಲಾ ಬಾಲಭವನದಲ್ಲಿ, ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಪಂಚಾಯತ್, ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ಆಯೋಜಿಸಲಾದ ಪ್ರಸಕ್ತ ಸಾಲಿನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತಿದ್ದರು.
ಬೇಸಿಗೆ ಶಿಬಿರದಲ್ಲಿ ಮಕ್ಕಳು ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳ ಬಹುದು. ಇಂತಹ ಶಿಬಿರಗಳ ಮೂಲಕ ಕಲೆಗಳು ಉಳಿಯುವುದರ ಜೊತೆಗೆ ಮಕ್ಕಳ ಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯ ಎಂದರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಅವರಲ್ಲಿನ ಪ್ರತಿಭೆಗಳನ್ನು ಗುರುತಿಸಲು ಸಾಧ್ಯ.ಮಕ್ಕಳು ಶಿಬಿರಗಳಲ್ಲಿ ಭಾಗವಹಿಸು ವುದರಿಂದ ಕಲೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಅರಿವು ಹೊಂದುತ್ತಾರೆ. ಇಂತಹ ಶಿಬಿರಗಳಲ್ಲಿ ಮಕ್ಕಳು ಪಾಲ್ಗೊಂಡಲ್ಲಿ ಮೌಲ್ಯಯುತವಾದ ಜೀವನ ಅಳವಡಿಸಿ ಕೊಳ್ಳಬಹುದು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಉಚ್ಚಿಲ ಮಹಾಲಕ್ಷ್ಮಿ ಶಾಲೆಯ ಕನ್ನಡ ಪ್ರಾಧ್ಯಾಪಕ ಸಂತೋಷ್, ಕರಕುಶಲ ಪ್ರಾಧ್ಯಾಪಕಿ ನಮಿತ, ಚಿತ್ರಕಲೆಗಳ ಪ್ರಾಧ್ಯಾಪಕ ಮಂಜುನಾಥ ಬೈಲೂರು, ಯಕ್ಷಗಾನ ಪ್ರಾಧ್ಯಾಪಕ ನಿರಂಜನ್ ಭಟ್, ನೃತ್ಯ ಪ್ರಾಧ್ಯಾಪಕಿ ಸ್ಪೂರ್ತಿ, ಕರಾಟೆ ಪ್ರಾಧ್ಯಾಪಕ ನೌಮನ್ ಹಾಗೂ ಕಾರ್ಯಕ್ರಮ ಸಂಯೋಜಕಿ ರಮ್ಯಾ ಉಪಸ್ಥಿತರಿದ್ದರು.
ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾ ಯಿತು. ಕಾರ್ಯಕ್ರಮದಲ್ಲಿ ಮಕ್ಕಳು ಪಂಚವಟಿ ಯಕ್ಷಗಾನ ಹಾಗೂ ನೃತ್ಯ ಚಿತ್ರಗಳ ಪ್ರದರ್ಶನ ನೀಡಿದರು. ಶಿಬಿರಾರ್ಥಿ ರಫನ್ ಸ್ವಾಗತಿಸಿ, ಚಿನ್ಮು ನಿರೂಪಿಸಿ, ಗಗನ್ ವಂದಿಸಿದರು.







