ಉಡುಪಿ-ಕಾಪು: ಗಾಳಿ-ಮಳೆಗೆ ಅಪಾರ ಹಾನಿ

ಉಡುಪಿ, ಮೇ 12: ಉಡುಪಿ ಮತ್ತು ಕಾಪು ತಾಲೂಕುಗಳಲ್ಲಿ ಈ ಋತುವಿನ ಮೊದಲ ದೊಡ್ಡ ಪ್ರಮಾಣದ ಗಾಳಿ-ಮಳೆಗೆ ಎರಡು ಜೀವಗಳು ನಷ್ಟವಾಗಿರುವುದು ಮಾತ್ರವಲ್ಲದೇ, ಎರಡೂ ತಾಲೂಕುಗಳಲ್ಲಿ ಅಪಾರ ಪ್ರಮಾಣ ಸೊತ್ತುಗಳ ಹಾನಿಯೂ ಸಂಭವಿಸಿದೆ.
ಕಾಪು ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಗಾಳಿ ಮಳೆಗೆ ಮಲ್ಲಾರು ಗ್ರಾಮದ ಸ್ವಾಗತ್ ನಗರ ಎಂಬಲ್ಲಿ ಚಲಿಸುತಿದ್ದ ರಿಕ್ಷಾ ಮೇಲೆ ಬೃಹತ್ ಗಾತ್ರದ ಮರವೊಂದು ಬೇರು ಸಹಿತ ಉರುಳಿ ಬಿದ್ದು ರಿಕ್ಷಾದಲ್ಲಿ ಪ್ರಯಾಣಿಸುತಿದ್ದ ಪಾದೂರು ಗ್ರಾಮದ ಪುಷ್ಪಾ (46) ಹಾಗೂ ಕಳತ್ತೂರು ಗ್ರಾಮದ ಕೃಷ್ಣ ಪೂಜಾರಿ (53) ಎಂಬವರು ಮೃತ ಪಟ್ಟಿದ್ದಾರೆ.
ಉಳಿದಂತೆ ಉಡುಪಿ ತಾಲೂಕು ಪೆರ್ಡೂರು ಗ್ರಾಮದ ರಮೇಶ್ ಎಂಬವರ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು 30 ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ. ಅಲ್ಲದೇ ಅದೇ ಗ್ರಾಮದ ಪ್ರಭಾಕರ ಶೆಟ್ಟಿ ಎಂಬವರ ಮನೆ ಮೇಲೆ ಮರ ಬಿದ್ದು 25,000ರೂ., ಗುಲಾಬಿ ಎಂಬವರ ಮನೆ ಮೇಲೆ ಮರಬಿದ್ದು 5,000ರೂ.,ಬೆಳ್ಳಂಪಳ್ಳಿ ಗ್ರಾಮದ ಮಂಜುನಾಥ್ ಎಂಬವರ ಮನೆ ಮೇರೆ ಮರ ಬಿದ್ದು 50 ಸಾವಿರ ರೂ. ನಷ್ಟ ಉಂಟಾಗಿದೆ.
ಉಳಿದಂತೆ ಕಾಪು ತಾಲೂಕು ಪಡು ಗ್ರಾಮದ ವಿಜಯ ಕೋಟ್ಯಾನ್ ಮನೆ ಮೇಲೆ ಮರಬಿದ್ದು 60,000, ಬ್ರಹ್ಮಾವರ ತಾಲೂಕು ಆರೂರು ಗ್ರಾಮದ ಕಾವೇರಿ ಎಂಬವರ ಮನೆ ಮೇಲೆ ಮರ ಬಿದ್ದು 80,000ರೂ. ಹಾನಿಯುಂಟಾಗಿದೆ. ಕಾರ್ಕಳ ತಾಲೂಕು ಕೌಡೂರು ಗ್ರಾಮದ ಕೇಶವ ಸೆಟ್ಟಿ ಎಂಬವರ ವಾಸದ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದ್ದು 25,000ರೂ. ಹಾಗೂ 41ಶಿರೂರು ಗ್ರಾಮದ ಅಪ್ಪಿ ಶೇರಿಗಾರ್ತಿ ಮನೆ ಮೇಲೆ ಮರ ಬಿದ್ದು 10 ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
17.4ಮಿ.ಮೀ. ಮಳೆ: ಗುರುವಾರ ರಾತ್ರಿ ಉಡುಪಿ ಹಾಗೂ ಕಾಪು ತಾಲೂಕಿನಲ್ಲಿ ಗಾಳಿ, ಗುಡುಗು ಸಿಡಿಲು ಸಹಿತ ಭಾರೀ ಮಳೆ ಸುರಿಯಿತು. ಕಾಪುವಿನಲ್ಲಿ 44.6ಮಿ.ಮೀ. ಹಾಗೂ ಉಡುಪಿಯಲ್ಲಿ 44.1ಮಿ.ಮೀ. ಮಳೆ ಸುರಿದ ಮಾಹಿತಿ ಬಂದಿದೆ. ಉಳಿದಂತೆ ಕಾರ್ಕಳದಲ್ಲಿ 12.7, ಬ್ರಹ್ಮಾವರದಲ್ಲಿ 11.2, ಹೆಬ್ರಿಯಲ್ಲಿ 9.4ಮಿ.ಮೀ. ಮಳೆಯಾಗಿದೆ. ಬೈಂದೂರಿನಲ್ಲಿ ಮಳೆ ಬಂದಿಲ್ಲ.ಜಿಲ್ಲೆಯಲ್ಲಿ ಸರಾಸರಿ 17.4 ಮಿ.ಮೀ. ಮಳೆಯಾಗಿದೆ.
ಹವಾಮಾನ ಮುನ್ಸೂಚನೆ: ಮುಂದಿನ ಎರಡು ದಿನಗಳಲ್ಲಿ ಮೇ 13 ಮತ್ತು 14ರಂದು ಉಡುಪಿಯೂ ಸೇರಿದಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಗಾಳಿ ಗುಡುಗು ಸಿಡಿಲಿನೊಂದಿಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.