ಮಂಗಳೂರು: ಪಂಪ್‌ವೆಲ್, ನಂತೂರು ವೃತ್ತದಲ್ಲಿ ವಾಹನ ದಟ್ಟಣೆ

ಮಂಗಳೂರು, ಮೇ 12: ನಗರದ ಪಂಪ್‌ವೆಲ್ ಹಾಗೂ ನಂತೂರು ವೃತ್ತದಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು ಎರಡು ಗಂಟೆ ವಾಹನ ದಟ್ಟಣೆ ಉಂಟಾಗಿ, ಸಾರ್ವಜನಿಕರು ಪರದಾಡುವಂತಾಯಿತು.
ಸಿಗ್ನಲ್ ಪ್ರಯೋಗ ಪರೀಕ್ಷೆ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಪಂಪ್‌ವೆಲ್ ಹಾಗೂ ನಂತೂರ್ ವೃತ್ತಕ್ಕೆ ಬಂದು ಸೇರುವ ಎಲ್ಲಾ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಇದರಿಂದ ಬೆಳಗ್ಗೆ ಕಚೇರಿಗಳಿಗೆ ಹೋಗುವವರ ಸಹಿತ ಹೆಚ್ಚಿನ ವಾಹನಗಳ ಸಂಚಾರವಿರುವುದರಿಂದ ವಾಹನ ದಟ್ಟಣೆ ಉಂಟಾಯಿತು.
ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಸಹಿತ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪಂಪ್‌ವೆಲ್ ಹಾಗೂ ನಂತೂರ್ ವೃತ್ತಗಳಿಗೆ ಸಿಗ್ನಲ್ ಅಳವಡಿಸಿದರೆ ಹೇಗೆ? ಎಂಬುವುದರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಕೆಪಿಟಿಯಲ್ಲಿ ಸಿಗ್ನಲ್ ಅಳವಡಿಸಿದ ಕಾರಣ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ನಂತೂರ್ ಮತ್ತು ಪಂಪ್‌ವೆಲ್ ವೃತ್ತಗಳಲ್ಲಿ ಸಿಗ್ನಲ್ ಅಳವಡಿಸಿದರೆ ಮತ್ತಷ್ಟು ವಾಹನ ದಟ್ಟಣೆಗೆ ಕಾರಣವಾಗಲಿದೆ. ಆದ್ದರಿಂದ ಇಲ್ಲಿ ಸಿಗ್ನಲ್ ಅಳವಡಿಸುವುದು ಸರಿಯಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





